ಚಿಪ್ಪಿಗಂಟದ ಕೊಬ್ಬರಿ
ಚಿಪ್ಪಿಗಂಟದ ಮೇಲೆ ಹಸಿಯೇತಕೈ ಕೊಬರಿ ? ಒಪ್ಪದೈ ಕಾಯಾಗಿ ಕೊಬ್ಬರಿಯು ಆಗಿ ಮುಪ್ಪಡರಲೇಂ ಬಾಳನೊಪ್ಪವಿಕ್ಕದ ಮೇಲೆ ಅಪ್ಪನೆಂತೊಲಿವನೈ ಜಾಣಮೂರ್ಖ//
ಕೊಬ್ಬರಿ ಚನ್ನಾಗಿ ಒಣಗಿ ಹದಗೊಂಡಿದ್ದರೆ ಅದಕ್ಕೆ ಬೆಲೆ ತಾನೆ ? ಅದು ಬಹಳ ರುಚಿಯೂ ಇರುತ್ತದೆ. ಇನ್ನೂ ಹಸಿಯಾಗಿದ್ದರೆ ಅದನ್ನು ಮತ್ತಷ್ಟು ಕಾಲ ಒಣಗಲು ಬಿಡುತ್ತಾರೆ. ಚಿಪ್ಪಿನಿಂದ ಬೇರ್ಪಟ್ಟ ಮೇಲೂ ಅದು ಹಸಿಯಿದ್ದರೆ ಅದು ಪೂರ್ಣ ಕಾಯೂ ಅಲ್ಲ ಇತ್ತ ಕೊಬ್ಬರಿಯೂ ಅಲ್ಲ. ಇದೆಂತಹಾ ಸ್ಥಿತಿ ! ಬದುಕೂ ಹೀಗೇನೇ ಗೆಳೆಯರೇ , ನಾವು ವಯಸ್ಸಾಗುತ್ತಾ ಅನುಭವಗಳ ಗಣಿಯಾಗಬೇಕು. ಅನುಭಾವದ ಸೌಗಂಧ ಬೀರಬೇಕು. ಬದುಕಿನಲ್ಲಿ ಗಟ್ಟಿಯಾಗಬೇಕು ಒಣಗಿದ ಹದವಾದ , ರುಚಿಯಾದ ಕೊಬ್ಬರಿಯಂತೆ ! ಹಸಿಯಿದ್ದು ಮುಗ್ಗುಲು ವಾಸನೆ ಬರುವಂತಾಗಬಾರದು ನಮ್ಮ ಬದುಕು. ಹಸಿಯಿರೋದು ಎಂದರೆ ಲೌಕಿಕ ಜೀವನಕ್ಕೆ ಅಂಟಿಕೊಂಡಿರೋದು ಎಂದೇ ಅರ್ಥ. ಸಾಧಕರು ಬದುಕುಕಿನಲ್ಲಿ ಕಳಿತು ಪಕ್ವವಾಗಬೇಕು. ಅದುಬಿಟ್ಟು ಅಹಂಕಾರ ಮಮಕಾರಗಳಿಂದಲೂ , ರಾಗದ್ವೇಷಾದಿ ಭಾವನೆಗಳಿಂದಲೂ ಕೂಡಿದ್ದರೆ ಈ ಅಪೂರ್ಣತ್ವದ ಕೊಬ್ಬರಿಯಂತೆಯೇ ಸರಿ ಅವರ ಬದುಕು ಕೂಡ ! ಬದುಕು ಹದಗೊಳ್ಳದಿದ್ದರೆ ಭಗವಂತ ಒಪ್ಪುವನೆ !? ಹೇಳಿ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021