ಗಂಗೆಯೊಡಲಿನ ಬಂಡೆ
ಗಂಗೆಯಾ ಬಂಡೆ ತಾಂ ಕುಡಿಯಬಲ್ಲುದೆ ನೀರ?
ಅಂಗಮಿರ್ದೊಡೆಯಾಯ್ತೆ ಸಂಗವರಿಯದಲೆ!
ಗುಂಗಿನೊಳಗಿರ್ದೊಡೇಂ ಗುರುತತ್ತ್ವವರಿಯದಿರೆ ಗಂಗೆಯಾ ಬಂಡೆವೊಲೊ ಜಾಣಮೂರ್ಖ //
ಸಾವಿರಾರು ವರ್ಷಗಳಿಂದಲೂ ಗಂಗಾ ನದಿಯಲ್ಲೇ ತೊಯ್ದಿದ್ದರೂ ಬಂಡೆ ಗಂಗೆಯ ನೀರನ್ನು ಕುಡಿಯಬಲ್ಲದೇನು ? ಹಾಗೆಯೇ ನಮಗೆ ಎಲ್ಲಾ ಅಂಗಗಳೂ ನಮ್ಮಲ್ಲೇ ಇದ್ದರೂ ಅವುಗಳ ಉಪಯೋಗದ ಕಲೆ ಗೊತ್ತಿರಬೇಕಲ್ಲ ! ಉದಾಹರಣೆಗೆ ಕಣ್ಣಿದೆ ; ಏನೇನೋ ನೋಡುತ್ತೇವೆ , ಕಿವಿಯಿದೆ ; ಏನೇನೋ ಕೇಳುತ್ತೇವೆ , ಬಾಯಿದೆ ಏನೇನೋ ಮಾತನಾಡುತ್ತೇವೆ ! ಹಾಗೆಯೇ ಮನಸ್ಸಿದೆ ! ಹಾಯಬಾರದ ಕಡೆಗೆಲ್ಲ ಹಾದು ಮಲಿನಗೊಳಿಸುತ್ತೇವೆ ! ಸದಾ ಗುರುವಿನ ಬಳಿಯೇ ಇದ್ದರೂ ಅಥವಾ ಗುರುವಿನ ಗುಂಗಿನಲ್ಲೇ ಇದ್ದರೂ ಗುರುತತ್ತ್ವದೆತ್ತರಕ್ಕೆ ಏರಲಾಗದೆ ತೊಳಲಾಡುತ್ತೇವೆ. ನೋಡಿ , ಸ್ವಲ್ಪ ಯೋಚಿಸಿ ! ನಮಗೂ , ಗಂಗೆಯೊಡಲಿನ ಬಂಡೆಗೂ ಏನಾದರೂ ವ್ಯತ್ಯಾಸವಿದೆಯೇ !? ಗುರುವೆಂಬ ಗಂಗೆಯೊಳು ತೊಯ್ದು ಗುರುತತ್ತ್ವದೊಳಗೊಂದಾಗಿ ನಾವೂ ಗುರುವಾಗಬೇಕೋ ! ಅಥವಾ ಗಂಗೆಯೊಡಲ ಬಂಡೆಯಂತೆ ಬಂಡೆಯಾಗೇ ಉಳಿಯಬೇಕೋ ನೀವೆ ಚಿಂತಿಸಿ ! ದೇವಾಲಯದಲ್ಲಿ ದೇವಶಿಲೆಯಾಗದಿದ್ದರೇನಂತೆ ಭಕ್ತರು ನಡೆದಾಡುವ ಹಾಸುಗಲ್ಲಾದರೂ ಆಗೋಣ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021