ಬಾಡಿಗೆಯ ಮನೆಯೊಳಗೆ
ಬಾಡಿಗೆಯ ಮನೆಯೊಳಗೆ ನೋಡು ಸುಮ್ಮನೆ ಜಗವ
ಹಾಡು ನಲಿ ಕಾಡದಿರು ಬೀಡು ಚಿರವಲ್ಲ !
ಓಡಿದಿರೆ ಉಬ್ಬೆಗದಿ ಕೋಡು ಬರ್ಪುದೆ ಪೇಳು
ಜಾಡಬಿಡದಿರು ಜೋಕೆ ಜಾಣಮೂರ್ಖ//
ನೋಡಿ ಗೆಳೆಯರೇ ನಾವಿರೋದೇ ಬಾಡಿಗೆ ಮನೆಯಲ್ಲಿ ! ಸ್ವಂತ ಮನೆ ಕಟ್ಟಿದೆ ಅಂತ ಕುಣಿಯುತ್ತೇವೆ. ಈ ಮನೆಯಿಂದ ಜಗತ್ತನ್ನು ಸುಮ್ಮನೇ ವೀಕ್ಷಿಸಬೇಕಷ್ಟೆ. ಈ ಮನೆಯಲ್ಲಿರುವಷ್ಟು ದಿನ ಹಾಡಿ , ನಲಿದು ಸಂತೋಷದಿಂದ ಇರಬೇಕಷ್ಟೆ. ಯಾರನ್ನೂ ನೋಯಿಸಬಾರದು, ಕಾಡಬಾರದು. ಉದ್ವೇಗದಿಂದ ‘ನಾನು’ ಸಾಧಿಸುತ್ತೇನೆ ಎಂದು ಓಡಿದರೆ ಕೋಡೇನೂ ಬರುವುದಿಲ್ಲ. ಮಾಡುವ ಸಾಧನೆ ನಿರಪೇಕ್ಷಣೀಯವಾಗಿದ್ದು – ಎಳೆಯ ಮಗುವೊಂದು ತಂದೆಯಾಯ್ಗಳ ಎದುರಿಗೆ ಬಾಲ್ಯಸಹಜವಾಗಿ ಗೆದ್ದು , ಪ್ರಶಂಸೆ ಪಡೆವ ಭಾವದಲ್ಲಿ ಭಗವಂತನ ಎದುರಲ್ಲಿ ಆಟವಾಡಿ ಜಗವ ನಕ್ಕು ನಲಿಸಿ , ನೆಮ್ಮದಿಯನ್ನು ಹಂಚಿ ಈ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕು. ಮಾಡಲೇಬೇಕು ! ಹಾಂ , ಮರೆಯದಿರಿ ಈ ಸಾಧಿಸುವ ಆಟದಲ್ಲಿ ನಡೆದು ಬಂದ ಜಾಡನ್ನು ಮರೆತು ಬಿಡಬಾರದು. ಮರೆತು ಎಲ್ಲೆಲ್ಲೋ ಸಾಗಿದರೆ ಕಷ್ಟ. ನಮ್ಮ ಹೆಜ್ಜೆ ಗುರುತುಗಳ ನೆನಪಿನ ಬುತ್ತಿ ನಮಗೆ ದಾರಿದೀಪವಾಗಬೇಕು. ಉದ್ವೇಗ ಪಡಬಾರದು. ಏಕೆಂದರೆ ಇಲ್ಲಿ ಯಾವುದೂ ಚಿರವಲ್ಲ ! ನಮ್ಮ ಕಾರ್ಯಾಕಾರ್ಯಗಳೆಲ್ಲವೂ ಯಾವುದೋ ಒಂದು ಒಳ್ಳೆಯದಕ್ಕೆ ಪೂರಕ , ನೆಪವಷ್ಟೆ ಎಂಬುದನ್ನು ಮರೆಯಬಾರದು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021