ಸದ್ಗುರು
ಕಲಿ ಮೊದಲು ಕಲಿವುದನು ಗುರುವಾಗುವಾ ಮುನ್ನ
ಕಲಿ ವಿಶ್ವದಾಲಯದೊಳೆಲ್ಲವನುಭವಿಸಿ
ಕಲಿವೊಡೀ ಜಗ ತಾನು ಗುರುವಪ್ಪುದೈ ದಿಟದಿ ಕಲಿಯುತಲೆ ಗುರುವಾಗೊ ಜಾಣಮೂರ್ಖ//
ಗುರು ಎನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ವಿದ್ಯಾರ್ಹತೆಯ ಮಾನದಂಡದಿಂದ ಇಂದು ಶಿಕ್ಷಕರ ಹುದ್ದೆಗೇರಬಹುದಷ್ಟೆ. ಆದರೆ ಗುರು ಎಂಬ ಸ್ಥಾನ ಹುದ್ದೆಯಲ್ಲ ! ಅದೊಂದು ಉತ್ಕೃಷ್ಟವಾದ , ದೈವೀಕವಾದ ಸ್ಥಾನ. ವಿದ್ಯಾರ್ಹತೆಯನ್ನು ಎಲ್ಲರೂ ಪಡೆಯಬಹುದಾದರೂ ಆ ಸ್ಥಿತಿಗೆ, ಆ ಎತ್ತರಕ್ಕೆ ಏರುವುದು ಬಹು ಕಷ್ಟ. ಗುರುವಾಗಬೇಕಾದರೆ ಈ ವಿಶ್ವದ ಆಲಯದಲ್ಲಿ ನಾವು ಮೊದಲು ವಿದ್ಯಾರ್ಥಿಗಳಾಗಬೇಕು. ಕಲಿವುದನ್ನು ಚನ್ನಾಗಿ ಕಲಿಯಬೇಕು. ಜೀವನ ಪರ್ಯಂತ ಕಲಿಯೋದು ಇದ್ದೇ ಇದೆ ಎಂಬ ಸತ್ಯವನ್ನು ಅರಿಯಬೇಕು. ಕಲಿವುದೆಲ್ಲವನ್ನೂ ಅನುಭವಿಸಿ ಕಲಿತು ಅನುಭಾವಿಯಾಗಬೇಕು. ಹಾಗೆ ಕಲಿಯಲು ಹೊರಟವನಿಗೆ ಈ ಜಗತ್ತೇ ಅದ್ವಿತೀಯ, ಶ್ರೇಷ್ಠ ಗುರುವಾಗಿಬಿಡುತ್ತದೆ. ಈ ಜಗದ ಮಡಿಲಲ್ಲಿ ಕಲಿಯುತ್ತಾ , ಕಲಿಯುತ್ತಾ ಗುರುವಾಗಬೇಕು ! ಶ್ರದ್ಧೆಯಿರಬೇಕು. ” ಶ್ರದ್ಧಾವಾನ್ ಲಭತೇ ಜ್ಞಾನಂ ” ಎಂದು ಗೀತೆಯಲ್ಲಿ ಭಗವಂತ ಸಾಕ್ಷಾತ್ ಶ್ರೀಕೃಷ್ಣನೇ ಉಪದೇಶಗೈದಿಲ್ಲವೇ ? ಆದರೆ ಪಠ್ಯಪುಸ್ತಕದ ಅರಿವಷ್ಟೇ ಅದರ ವ್ಯಾಪ್ತಿಯಲ್ಲ ! ಅದರ ವ್ಯಾಪ್ತಿ ಅನಂತವಾದದ್ದು ! ಎಂಬ ದಿವ್ಯ ಸತ್ಯವನ್ನರಿತು ಬದುಕುವವನೇ , ಅರಿವನ್ನು ಹಂಚುವವನೇ ಹಾಗೆಯೇ ಬದುಕ ಕೊಡುವವನೇ ನಿಜವಾದ ಗುರುವಾಗುತ್ತಾನೆ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021