ಮಂದಿ ಮರೆವರೊ ಜಾಡ
ನೊಂದವನ ಕಂಡು ಮಿಗೆ ನೋವ ನೀಳ್ಪುದು ವಿಕೃತಿ
ಬಂದು ಹೆಗಲಿತ್ತು ಸಂತೈಸುವುದೆ ಸುಕೃತಿ
ಕಂದಿ ಕುಂದಿದನಿಲ್ಲಿ ನೀನೊಬ್ಬನೇನಲ್ಲ
ಮಂದಿ ಮರೆವರೊ ಜಾಡ ಜಾಣಮೂರ್ಖ //
ಈ ಜಗತ್ತೇ ಹೀಗೆ ಗೆಳೆಯರೇ , ಒಬ್ಬ ತುಂಬಾ ನೊಂದಿದ್ದಾನೆ ಎಂದರೆ ಅವನಿಗೆ ಮತ್ತಷ್ಟು ನೋವಿತ್ತು , ನಕ್ಕು ಅಣಕಿಸಿ ಕೆಣಕಿ ವಿಕೃತಾನಂದ ಪಡೆವವರೇ ಇಲ್ಲಿ ಹೆಚ್ಚಿದ್ದಾರೆ. ಇದೇ ವಿಕೃತಿ. ಆದರೆ ನೊಂದವನ ನೋವಿಗೆ ಹೆಗಲು ಕೊಟ್ಟು ಸಂತೈಸುವುದೇ ಸುಕೃತಿ. ಓ ಗೆಳೆಯಾ , ಈ ನೋವು ನಿನ್ನೊಬ್ಬನದೇ ಅಲ್ಲ ! ಎಲ್ಲರೂ ಬಾಳ ಬೇಗೆಯಲ್ಲಿ ನೊಂದವರೇನೇ ! ಆದರೆ ಅವರು ತಾವು ನಡೆದು ಬಂದ ಜಾಡನ್ನು , ಹೆಜ್ಜೆ ಗುರುತುಗಳನ್ನು ಬಹು ಬೇಗ ಮರೆತೇ ಬಿಡುತ್ತಾರೆ. ಮೂಕಪ್ರಾಣಿಯೋ , ಪಕ್ಷಿಯೋ ಮತ್ತೊಂದು ಪ್ರಾಣಿಗೋ , ಪಕ್ಷಿಗೋ ಒದಗಿದ ದುರ್ಗತಿಯನ್ನು ಕಂಡು ಕರುಳು ಮಿಡಿಯುತ್ತದೆ. ಆದರೆ ಈ ಮಾನವ ಪ್ರಾಣಿ ಇದ್ದಾನಲ್ಲಾ ! ಮೀರಿದ ಸ್ವಾರ್ಥ ಇವನಿಗೆ ! ತಾನು ನಡೆದು ಬಂದ ಹೆಜ್ಜೆ ಗುರುತುಗಳನ್ನು ಮರೆತೇ ಬಿಡುತ್ತಾನೆ. ತಾನಿದ್ದುದೇ ಹೀಗೆ , ಮುಂದೆ ಇರುವುದೂ ಹೀಗೆಯೇ , ಇದೇ ಶಾಶ್ವತ ಎಂಬ ಭ್ರಮೆಯಲ್ಲೇ ಬದುಕುತ್ತಾನೆ ! ದಾಸರ ನುಡಿಯಂತೆ ಮಾನವ ಜನ್ಮವೇನೋ ದೊಡ್ಡದೇ , ಆದರೆ ಇದೆಂತಹಾ ಸಣ್ಣತನ !! ಎಂತಹಾ ವಿಪರ್ಯಾಸವಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021