ಜಾವ ತೀರುವ ಮುನ್ನ
ಕಾವಗುರುವಿರುವಾಗ ಸಾವ ಭಯವೇಕಯ್ಯ
ಜೀವದಿಂ ಬದುಕೇಳೊ ಜೀವವಿರುವನಕ
ಜಾವ ತೀರುವ ಮುನ್ನ ಭಾವದಾರಿದ್ರ್ಯ ತೂರ್
ಜೀವಭಾವದಿ ಭಜಿಸೊ ಜಾಣಮೂರ್ಖ //
ಗುರುಬಂಧುವಿಗೆ ಸಾವಿನ ಭಯವೇನು !? ಕಾವ ಗುರು ಜೀವನದ ಅರ್ಥವನ್ನು ಬಿಡಿಸಿ ಭವಬಂಧನಗಳ ಭಯ ಕಳೆದುಬಿಡುತ್ತಾನೆ. ಬದುಕಿನ ಅರ್ಥವನ್ನು ತಿಳಿಸುತ್ತಾನೆ. ನಮಗೆಲ್ಲಾ ಜೀವವೇನೋ ಇದೆ. ಆದರೆ ಜೀವಂತವಾಗಿ ಬದುಕುವುದು ತಿಳಿದಿಲ್ಲ. ಇದನ್ನು ಗುರುವಿನ ಬದುಕನ್ನು ನೋಡಿದರೆ ಸಾಕು. ಸಮರ್ಥವಾಗಿ ತಿಳಿಯುತ್ತದೆ. ಈ ಜೀವಂತವಾಗಿ ಬದುಕೋದು ಎಂಬ ಪರಿಕಲ್ಪನೆ ಬಹು ಎತ್ತರದ್ದು. ನಮ್ಮಲ್ಲಿರೋ ಭಾವದಾರಿದ್ರ್ಯವಳಿದು ಜೀವಭಾವದಿಂದ ಬದುಕಬೇಕು. ತೋರಿಕೆ , ಯಾಂತ್ರಿಕತೆ , ನಾಟಕೀಯತೆ ಇವೆಲ್ಲಾ ಉದರ ವೈರಾಗ್ಯದ ಬೇರೆ ಬೇರೆ ಮುಖಗಳಷ್ಟೆ. ಇದೇ ಭಾವದಾರಿದ್ರ್ಯ ! ಈ ದಾರಿದ್ರ್ಯವನ್ನು ಮನಸ್ಸಿನಿಂದ ಉಚ್ಛಾಟಿಸಿ ಶುದ್ಧಾತ್ಮರಾಗಿ ಬದುಕಬೇಕಿದೆ. ಜೀವವಿರುವ ವರೆಗೆ ಜೀವಂತವಾಗಿ ಬದುಕಬೇಕಿದೆ. ಆಮೇಲಿನ ಬದುಕೆಂತೋ ! ಬವಣೆಗಳೆಂತವೋ ಬಲ್ಲವರಾರು ! ಈಗ ಅವಕಾಶವಿದೆ. ಗುರುಶಕ್ತಿಯನ್ನು ನಂಬಿ ಬದುಕಿ ತೋರಬೇಕಿದೆ ಅಷ್ಟೆ . ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021