ಪ್ರಾರ್ಥನೆ
ಪ್ರಾರ್ಥನೆಯ ಭಾವದೊಳಗಿರೆ ಧೈರ್ಯ ಭರವಸೆಗ
ಳರ್ತಿಯಿಂ ಸ್ತುತಿಸೇಳು ಕಾಲ ಕಳೆವೇಕೆ?
ವ್ಯರ್ಥ ಜಿಜ್ಞಾಸೆಯಿಂದೇನ ಹುಡುಕುವೆ ಮರುಳೆ
ಅರ್ತಿಯಿಂ ಪ್ರಾರ್ಥಿಸೇಳ್ ಜಾಣಮೂರ್ಖ//
ಓ, ಗೆಳೆಯಾ ಪ್ರಾರ್ಥನೆಯು ಖಂಡಿತವಾಗಿಯೂ ಜೀವನಕ್ಕೆ ಧೈರ್ಯ ಮತ್ತೆ ಭರವಸೆಗಳನ್ನು ನೀಡುತ್ತದೆ. ಬದುಕಿನ ನೋವುಗಳನ್ನು ಸಹಿಸುವ ಶಕ್ತಿಯನ್ನು ನೀಡುತ್ತದೆ. ನಮ್ಮ ಮನೋಬಲವು ಹೆಚ್ಚುತ್ತದೆ. ಆತ್ಮವಿಶ್ವಾಸದ ಬದುಕು ನಮ್ಮದಾಗುತ್ತದೆ. ಮತ್ತೆ ತಡವೇಕೆ ? ಇಷ್ಟು ಕಾಲವೂ ವ್ಯರ್ಥವಾಗಿ ಜಿಜ್ಞಾಸಾಮತಿಗಳಾಗಿ ಕಾಲಕಳೆದಿದ್ದಾಯ್ತು ! ಏನು ಸಿಕ್ಕಿತು !? ಏನಾದರೂ ಸಿಕ್ಕಿದೆಯೆ ! ಒಂದು ನಿಲುವಿಗಂತೂ ಬಂದಿದ್ದೇವೆ. ಅನಂತ ಸೃಷ್ಟಿಯನ್ನು ನಿಯಂತ್ರಿಸುತ್ತಿರುವ ಒಂದು ದಿವ್ಯ ಶಕ್ತಿಯಂತೂ ಇದೆ ಎಂಬುದೇ ಆ ನಿಲುವು. ಆ ದಿವ್ಯಶಕ್ತಿಯ ಪ್ರಾರ್ಥನೆಯನ್ನು ಭಕ್ತಿಯಿಂದ ಇನ್ನಾದರೂ ಮಾಡಬಾರದೇಕೆ ? ಕಣ್ಣಿಗೆ ಕಾಣದ ವೈರಾಣುವೊಂದಕ್ಕೆ ಇಷ್ಟೊಂದು ಶಕ್ತಿಯಿದೆ ಎಂದಮೇಲೆ ಇನ್ನು ಈ ಅನಂತ ಸೃಷ್ಟಿಯನ್ನೇ ನೇಪಥ್ಯದಲ್ಲಿ ನಿಂತು ಆಡಿಸುತ್ತಿರುವ ಆ ಶಕ್ತಿಗೆ ಮನುಕುಲವನ್ನು ಕಾಯುವ ಶಕ್ತಿಯೂ ಇರಲೇಬೇಕಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021