ಕಮ್ಮಿತ್ತು ಬದುಕೇಳು
ಬೊಮ್ಮ ಭವಿತವ್ಯ ತಾ ಬೊಮ್ಮ ಗೌಪ್ಯವದಿರಲು
ಸುಮ್ಮನೆಯೆ ಬೆದಕಿ ಬಲು ಉಬ್ಬೆಗವದೇಕೆ ?
ಹಮ್ಮಯಿಸಿ ಕೊರಗುವವೆ ಖಗಮೃಗಾದಿಗಳೆಲ್ಲ
ಕಮ್ಮಿತ್ತು ಬದುಕೇಳೊ ಜಾಣಮೂರ್ಖ//
ಬಹುಶಃ ಭವಿಷ್ಯವನ್ನು ನೆನೆನೆನೆದು ತುಂಬಾ ಉದ್ವೇಗಕ್ಕೆ ಒಳಗಾಗುವ ಪ್ರಾಣಿ ಮನುಷ್ಯ ಮಾತ್ರ ಅನ್ನಿಸುತ್ತೆ. ಬ್ರಹ್ಮ ಭವಿತವ್ಯವು ಬ್ರಹ್ಮನಷ್ಟೇ ಸತ್ಯವೂ ಹೌದು ! ಗೌಪ್ಯವೂ ಹೌದು ! ಖಗಮೃಗಾದಿಗಳು (ಪಕ್ಷಿಗಳು ಪ್ರಾಣಿಗಳು) ಬಹು ನಿಶ್ಚಿಂತೆಯಿಂದ ಬದುಕುತ್ತವೆ. ನಾವು ಮಾತ್ರ ನಮ್ಮ ಭವಿತವ್ಯ ಹಾಗಿರಬೇಕು , ಹೀಗಿರಬೇಕು ಅಂತ ಕನಸು ಕಟ್ಟಿಕೊಳ್ಳುತ್ತೇವೆ ! ಮತ್ತು ನನಸಿಗಾಗಿ ಪರಿತಪಿಸುತ್ತೇವೆ. ಬರೀ ಉದ್ವೇಗದಲ್ಲೇ ಬದುಕಿ ಭವಿಷ್ಯದ ಚಿಂತೆಯಲ್ಲಿ ಸುಂದರವಾದ ವರ್ತಮಾನವನ್ನು ಚಿಂತೆಯಲ್ಲೇ ದೂಡುತ್ತೇವೆ ಮತ್ತು ಕಳೆದುಕೊಳ್ಳುತ್ತೇವೆ. ಮೈಮರೆತು ಕೊರಗಿ ಕಂದಿ ಕೃಷರಾಗಿ ಹೋಗುತ್ತೇವೆ. ಇಂತಹಾ ಬದುಕಾದರೂ ಏಕೆ !? ಬದುಕಿನ ಸಾರವನ್ನು ಸವಿದು, ಅದರ ಸವಿಯನ್ನು ಇತರರಿಗೂ ಹಂಚಿ , ಪಸರಿಸಿ ಬದುಕೋಣ. ಬದುಕನ್ನು ಅನುಭವಿಸಿ ಸಂಭ್ರಮಿಸೋಣ ! ಆಗ ಬದುಕು ಸುಂದರ ! ಸುಮಧುರ ಸಂತಸಮಯ ಅಲ್ಲವೇ ಗೆಳೆಯರೇ ?
( ಕಮ್ಮು+ಇತ್ತು=ಕಮ್ಮಿತ್ತು
ಕಮ್ಮು ಎಂದರೆ ಪರಿಮಳ / ಇತ್ತು ಎಂದರೆ ನೀಡು ಎಂದರ್ಥ.)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021