ಕರ್ಮ ಸವೆಯದ ಮೇಲೆ
ಕನವರಿಸಿ ಕನವರಿಸಿ ಬಿದ್ದರೇನಡಿಗಡಿಗೆ
ಕನವರಿಕೆ ಕಳೆಯದಿರಲೇನಿದ್ದರೇನು?
ಮನುಜತ್ವ ಮರೆತು ಬಾಳ್ನಿದಿರೆಯೊಳ್ದೂಡೆ ತಾ
ಕೊನೆ ಮೊದಲದೆಲ್ಲಿಯದೊ ಜಾಣಮೂರ್ಖ//
ಇಂದು ನಮ್ಮ ಬದುಕೇ ಹೀಗಾಗಿ ಬಿಟ್ಟಿದೆ ನೋಡಿ. ಲೌಕಿಕ ಭೋಗ ಭಾಗ್ಯಗಳ ಕನವರಿಕೆ ಬಹುವಾಗಿಬಿಟ್ಟಿದೆ. ಮತ್ತೆ ಮತ್ತೆ ಅವೆಲ್ಲವೂ ಕ್ಷಣಿಕವೆಂದು ಗೊತ್ತಾದರೂ ಸಹ ಮತ್ತೆ ಮತ್ತೆ ಅದೇ ಮಾಯಾ ಕೂಪದಲ್ಲೇ ಬೀಳುತ್ತೇವೆ , ನೋಯುತ್ತೇವೆ , ಮತ್ತೆ ಬೀಳುತ್ತೇವೆ ! ಏನಿದ್ದರೆ ಏನು ಈ ಕನವರಿಕೆ ಕಳೆಯದಿದ್ದರೆ ! ಈ ಬಾಳೇನು ಎಚ್ಚರವಾಗದ ನಿದಿರೆಯೇನು !? ಎಚ್ಚರಗೊಂಡರೂ ಮತ್ತದೇ ನಿದಿರೆ ! ಮಂಪುರು ! ಮನುಷ್ಯತ್ವವನ್ನು ಮರೆತು ನಿದಿರೆಯಲ್ಲೇ ಕಳೆದರೆ ಇದಕ್ಕೆ ಕೊನೆಮೊದಲೆಲ್ಲಿಯದು !? ಮತ್ತದೇ, ಪುನರಪಿ ಜನನಂ ಪುನರಪಿ ಮರಣಂ ! ಕರ್ಮ ಸವೆಯದ ಮೇಲೆ ಮತ್ತೇನು ಮಾಡುವುದು ಅಲ್ಲವೇ !? ಇನ್ನಾದರೂ ನಿದಿರೆಯಿಂದ ಎಚ್ಚೆತ್ತು ಸನ್ನಡತೆ , ಸಚ್ಚಾರಿತ್ರ್ಯಗಳಿಂದ ಮುಕ್ತಿ ಮಾರ್ಗದ ಮೆಟ್ಟಿಲನ್ನು ಏರುತ್ತಾ ಸಾಗಬೇಕಲ್ಲವೇ ಗೆಳೆಯರೇ ! ಅದಕ್ಕೆ ಬಿಡಬೇಕಲ್ಲ ಈ ಮಾಯೆ ! ಅದಕ್ಕೇ ಆದಿ ಶಂಕರಾಚಾರ್ಯರು ಇಹ ಸಂಸಾರೇ ಬಹು ನಿಸ್ಸಾರೇ ! ಎಂದಿದ್ದಾರೆ ! ಈ ಮಾತು ಕಟು ಸತ್ಯವೇ ಹೌದು. ಇನ್ನಾದರೂ, ಇಷ್ಟು ನೋವು ತಿಂದ ಮೇಲಾದರೂ ಮಾನವರಾಗಿ ಬದುಕಬೇಕಿದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021