ಕಾಣೇಳು ದೇವನನು
ಬಾಳ ಹಣ್ಗೈದದರ ಸವಿಯ ದೇವನಿಗಿಕ್ಕು
ಕೂಳಿಕ್ಕಿ ತಣಿಸು ಮಿಗೆ ನೀರಿತ್ತು ಹರಸು
ಏಳೇಳು ಲೋಕದೊಳಗೀ ತಣಿವೊಳಿಹ ದೇವ
ಏಳು ಕಾಣೇಳವನ ಜಾಣಮೂರ್ಖ//
ಬಾಳನ್ನು ಹಣ್ಣಾಗಿಸೋದು ಅಂದರೆ ಮನಸ್ಸನ್ನು ಆಮೇಲೆ ಬುದ್ಧಿಯನ್ನು ತನ್ಮೂಲಕ ನಮ್ಮ ವರ್ತನೆಗಳನ್ನು ಹಣ್ಣಾಗಿಸೋದು, ಪಕ್ವಗೊಳಿಸೋದು ಎಂದರ್ಥ. ಆಗ ನಮ್ಮ ಬದುಕು ಅಕ್ಷರಶಃ ಹಣ್ಣಾಗುತ್ತೆ. ಅದರ ಸವಿಯನ್ನು ದೇವನಿಗಿತ್ತು ನಲಿಯಬೇಕು ! ಏನು ಅದನ್ನು ಸವಿಯಲು ಭಗವಂತ ಬರುವನೇನು ! ಎಂದು ಅಚ್ಚರಿಗೊಳ್ಳುವಿರೇನು ? ಖಂಡಿತ ಬರುತ್ತಾನೆ. ಆದರೆ ನಮಗೆ ಅವನನ್ನು ಕಾಣುವ ಕಣ್ಣು ಬೇಕಷ್ಟೆ. ಅದಕ್ಕೂ ಮೊದಲು ನಾವು ಅರ್ಥಾತ್ ನಮ್ಮ ಮನಸ್ಸು ಹಣ್ಣಾಗಬೇಕಿದೆ. ಈಗ ನೀವೇ ನೋಡಿ ಆ ದೇವನು ಹೇಗಿರುತ್ತಾನೆ ಅಂತ. ಹಸಿದು ಬಂದವರಿಗೆ ಅನ್ನ ನೀರಿಟ್ಟು ಅವರ ಹಸಿವನ್ನು ನೀಗಿ. ಅವರಿಗೆ ಒಳಿತಾಗಲೆಂದು ಪ್ರೀತಿಯಿಂದ ಹೃತ್ಪೂರ್ವಕವಾಗಿ ಹರಸಿ , ಹಾರೈಸಿ. ಅವರಲ್ಲಿ ಹಸಿವು ತೃಷೆಯಾರಿದ ಮೆಲೆ ಕಾಣುವ ತೃಪ್ತ ಭಾವವನ್ನು ನೋಡಿ ! ಆ ಸಂತೃಪ್ತ ಭಾವವಿದೆಯಲ್ಲಾ ಅದರಲ್ಲಿರುತ್ತಾನೆ ಭಗವಂತ ! ಏಳೇಳು ಲೋಕದಲ್ಲೂ ಸಹ ಭಗವಂತನನ್ನು ಎಲ್ಲೆಲ್ಲೋ ಹುಡುಕುತ್ತಾರೆ ಜನ. ಆದರೆ ನಾವು ಹರಿಸುವ ಪ್ರೀತಿಯಲ್ಲಿ ,ತ್ಯಾಗದಲ್ಲಿ , ನಿರಪೇಕ್ಷಣೀಯವಾದ ಸೇವೆಯಲ್ಲಿ ಭಗವಂತನನ್ನು ಕಾಣಬೇಕು. ಅದು ಬಿಟ್ಟು ಗುಡಿ, ಮಸೀದಿ , ಚರ್ಚ್ ಬೇರೆಲ್ಲೆಲ್ಲೋ ಅರಸಿದರೆ ಅವನ ಮೂರ್ತಿಯನ್ನು ನೋಡಬಹುದಷ್ಟೆ ಈ ಚರ್ಮಚಕ್ಷುವಿನಿಂದ. ನಮ್ಮ ಆತ್ಮಚಕ್ಷುವಿಗೆ ಅವನು ಕಾಣಬೇಕೆಂದರೆ ಪ್ರೀತಿ , ತ್ಯಾಗ ಹಾಗೂ ನಿಸ್ವಾರ್ಥ , ನಿರಪೇಕ್ಷಣೀಯವಾದ ಸೇವೆಯಿಂದ ಮಾತ್ರವೇ ಸಾಧ್ಯ. ಹಾ, ಇನ್ನೊಂದು ವಿಷಯ. ಕೇವಲ ಅವನನ್ನು ನೋಡೋದಕ್ಕಾಗಿ ಜಗವನ್ನು ಪ್ರೀತಿಸಿದರೆ , ತ್ಯಾಗಗೈದರೆ , ಸೇವೆಗೈದರೆ ಅದು ನಿಜಕ್ಕೂ ನಿರರ್ಥಕ. ಬದುಕಲ್ಲಿ ದೇವನಿರುವಿಕೆಯನ್ನು ಅನುಭವಿಸಬೇಕು. ಅದಕ್ಕಾಗಿ ಈ ಎಲ್ಲಾ ಮೌಲ್ಯಗಳ ಅನುಷ್ಠಾನವಾಗಬೇಕು. ಆಗ ನೋಡಿ, ಅಲ್ಲಿದೆ ನೋಡಿ ಭಗವದಾನಂದ. ಏಳಿ ಗೆಳೆಯರೇ ಮತ್ತೇಕೆ ತಡ ! ಆ ಭಗವಂತನ ದಿವ್ಯಾನುಭವವನ್ನು ಅನುಭವಿಸಲು ಸನ್ನದ್ಧರಾಗಿ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021