ಕಡಲ ಕಿಚ್ಚಿಗು ಮಿಗಿಲು ಒಡಲ ಕಿಚ್ಚಿದು ನೋಡ
ಸುಡುವುದೈ ತನು ಮನವ ಕಡೆತನಕ ಬಿಡದೆ
ಎಡೆಯೆಲ್ಲ ಭಸ್ಮವೈ ನಡುಗಿದರು ನರಸುರರು
ಮೃಡನೆ ಬೇಡಿದ ಬಿಕ್ಕೆ ಜಾಣಮೂರ್ಖ//
ಕಡಲ ಕಿಚ್ಚನ್ನು ಬಡಬಾಗ್ನಿ ಎನ್ನುತ್ತಾರೆ. ಅದು ಪ್ರಳಯಾಗ್ನಿಯೇ ಸರಿ. ಆದರೆ ಈ ಒಡಲ ಕಿಚ್ಚಿದೆಯಲ್ಲಾ ಅದಕ್ಕಿಂತಲೂ ಒಂದು ಕೈ ಹೆಚ್ಚು! ಎರಡು ತರಹದ ಕಿಚ್ಚಿದೆ ನಮ್ಮಲ್ಲಿ ! ಒಂದು ದೈಹಿಕವಾದದ್ದು, ಇನ್ನೊಂದು ಮಾನಸಿಕವಾದದ್ದು. ದೈಹಿಕವಾದದ್ದು ನಮ್ಮ ತುತ್ತಿನ ಚೀಲಕ್ಕೆ ಏನನ್ನೇ ತುಂಬಿದರೂ ಭಸ್ಮಗೈಯ್ಯುತ್ತದೆ. ಮತ್ತೊಂದು ತಮಣೆಯೇ ಆಗದು ! ನಿತ್ಯ ಹೊಗೆಯಾಡುತ್ತಲೇ ಇರುತ್ತದೆ. ಮನಸ್ಸನ್ನು ಸುಡುತ್ತಲೇ ಇರುತ್ತದೆ. ಎಲ್ಲವೂ ಈ ಮನದ ಬಡಬಾಗ್ನಿಗೆ ಆಹುತಿ ! ನರರ ಮಾತು ಹಾಗಿರಲಿ ಸುರರೂ ಸಹ ಇದರ ಜ್ವಾಲೆಗೆ ಸಿಕ್ಕು ನರಳಿ ಹೋದರು. ಇಂದ್ರದೇವನೇನು ! ಚಂದ್ರದೇವನೇನು ! ಬ್ರಹ್ಮರ್ಷಿ ವಿಶ್ವಾಮಿತ್ರರಾದಿಯಾಗಿ ಇದರ ಉರಿಗೆ ತುತ್ತಾಗದವರೇ ಇಲ್ಲ. ಇದೇನು ಸಾಮಾನ್ಯವಾದ ಬೆಂಕಿಯಲ್ಲ ! ಅರಿಷಡ್ವರ್ಗಗಳ ಬೆಂಕಿ , ಅಷ್ಟಮದಗಳ ಬೆಂಕಿ. ಇದರ ಉರಿಯಲ್ಲಿ ಬೇಯದವನೊಬ್ಬನನ್ನು ತೋರಿಸಿ ನೋಡೋಣ ! ಸಾಕ್ಷಾತ್ ಶಿವನೇ ಭಿಕ್ಷಾಪಾತ್ರೆ ಹಿಡಿಯುವಂತಾಯ್ತು ! ಇನ್ನು ನಾವೆಲ್ಲಾ ಯಾವಲೆಕ್ಕ ! ಹಾ, ಈಗ ವಿಷಯಕ್ಕೆ ಬರುತ್ತೇನೆ. ಇಷ್ಟು ದಿನ ನಾವೂ ಸಹ ಬೆಂದಿದ್ದಾಯ್ತು. ಹಸಿವಿನ ಬೆಂಕಿ ಇದ್ದದ್ದೇ ಬಿಡಿ. ಅದಕ್ಕೇನೂ ದಾರಿಯಿಲ್ಲ. ಆದರೆ ಇನ್ನಾದರೂ ಮಾನಸಿಕವಾದ ಈ ಒಡಲ ಕಿಚ್ಚಿನ ಉರಿಯಿಂದ ದೂರವಿರೋಣವೇ ? ಶಾಂತವಾಗಿ ಯೋಚಿಸಿ. ಪ್ರಯತ್ನಿಸಿ. ಸಾಧಕರಾಗಬೇಕಿದೆ ನಾವು! ಇದನ್ನು ಸಾಧಿಸುವ ಪಥದಲ್ಲಿ ಸಾಗುವವರಿಗೆ ಭಗವಂತನ ಅನುಗ್ರಹವಿದ್ದೇ ಇರುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021