ಭಯವಿತ್ತು ಬಲವಿತ್ತು ಚಿಂತೆಯಿತ್ತಂತೆ ಮಿಗೆ
ಲಯದ ಅರಿವನ್ನಿತ್ತು ಮಾಯೆಯಂ ಬಿಟ್ಟು
ದಯೆಯಭಯವಿತ್ತು ತಾ ಭವಿತವಂ ಮುಚ್ಚಿಟ್ಟು
ನಿಯತಿ ನೋಳ್ಪುದುಮೇಕೊ ಜಾಣಮೂರ್ಖ//
ಸೂಕ್ಷ್ಮವೂ , ಗೌಪ್ಯವೂ ಮತ್ತೆ ಅಪಾರವೂ ಆದ ಈ ದಿವ್ಯ ಭವ್ಯ ಸೃಷ್ಟಿ ರಹಸ್ಯವು ಯಾರಿಗೂ ತಿಳಿಯುತ್ತಿಲ್ಲ ! ತಿಳಿದವರು ಸುಮ್ಮನಿದ್ದಾರೆ ! ಇದು ಹೇಗಿದೆ ನೀವೇ ನೋಡಿ….. ಈ ಬದುಕಿನಲ್ಲಿ ನಮಗೆ ಮುಂದೇನೋ ಎಂಬ ಒಂದು ಅಜ್ಞಾತ ಭಯವಿದೆ ! ಜೊತೆಗೆ ಏನೇ ಬಂದರೂ ಎದುರಿಸೋ ಬಲವೂ ಇದೆ ! ಜೊತೆಜೊತೆಗೆ ಚಿಂತೆಯೂ ಇದೆ ! ಈ ಚಿಂತೆಗೆ ಕೊನೆಯಿರದು ಬಿಡಿ. ಜೀವ ಇರೋ ವರೆಗೂ ಚಿಂತೆ ! ಇದೇ ಬಿಡದ ಮಾಯೆ ! ಈ ಜಗತ್ತು ನಶ್ವರ, ಎಲ್ಲವೂ ನಾಶವಾಗುತ್ತದೆ , ತಾನೂ ಉಳಿಯುವುದಿಲ್ಲವೆಂಬ ಅರಿವಿದೆ ! ಆದರೂ ಆಸೆ , ತನ್ನದೆಂಬ ಸ್ವಾರ್ಥ, ಅಹಂಕಾರ , ಮಮಕಾರ , ರಾಗದ್ವೇಷಾದಿ ಭಾವಗಳು ವಿಚಿತ್ರವೆನಿಸುವುದಿಲ್ಲವೇ !? ಈ ಬದುಕೂ ಕೂಡ ಹಾಗೇ ಇದೆ. ಭಯ ಬರುತ್ತೆ ಹೋಗುತ್ತೆ ! ಏನೋ ಪರಿಹಾರವಂತೂ ಸಿಕ್ಕುತ್ತೆ. ಮತ್ತದೇ ಬದುಕು ! ಮತ್ತೊಂದು ಭಯ , ಚಿಂತೆ ಮತ್ತೆ ಪರಿಹಾರ ! ಭಯಕೃತ್ ಭಯನಾಶನಃ ಭಯ ಕೊಟ್ಟ ಶಕ್ತಿಯೇ ಭಯವನ್ನು ಕಳೆವ ಅಭಯವನ್ನೂ ನೀಡುತ್ತಿದೆ. ಆದರೆ ಮುಂದಾಗುವುದನ್ನು ಮಾತ್ರ ಗೌಪ್ಯವಾಗಿಟ್ಟಿದೆ ಅಷ್ಟೆ. ಆದರೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ. ನಮ್ಮಲ್ಲಿ ಕೆಟ್ಟದ್ದಿದ್ದರೆ ಘಟಿಸುವುದೂ ಕೆಟ್ಟದ್ದೇ ಆಗಿರುತ್ತದೆ. ಆದರೆ ಅಂತಿಮ ಪರಿಣಾಮ ಒಳ್ಳೆಯದೇ ! ಚಿಂತಿಸದಿರಿ ಗೆಳೆಯರೇ. ಹಾಗೇ ನಮ್ಮ ಬದುಕು ನಡೆದುಬಂದ ಜಾಡನ್ನು ಗಮನಿಸಿ ! ನಿಮಗೇ ತಿಳಿಯುತ್ತದೆ. ಆದರೆ ವಿಧಿಯ ಆಟ ಏಕೆ ಹೀಗೆಂಬುದೆನ್ನುವುದೇ ರಹಸ್ಯವಾಗಿದೆ. ನೇಪಥ್ಯದಲ್ಲಿ ನಿಂತು ಎಲ್ಲವನ್ನು ನೋಡುತ್ತಾ , ಆಡಿಸುತ್ತಿರುವ ಸೂತ್ರಧಾರನ ಉದ್ದೇಶವೇನಿರಬಹುದು ?! ಏನೇನಕ್ಕೋ ತಲೆ ಕೆಡಿಸಿಕೊಳ್ಳದೇ ಈ ವಿಷಯವನ್ನು ಚಿಂತಿಸಬೇಕಿದೆ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021