ಒಂದು ದಿನದಾ ಪ್ರೀತಿಯೇನಿದು
ಅಮ್ಮ ನಿನ್ನನು ಸ್ಮರಿಸಲು !
ದಿನವು ದಿನವೂ ನಿನ್ನ ದಿನವೇ
ನಿನ್ನ ತ್ಯಾಗವ ನೆನೆಯಲೂ//
ಹೊತ್ತೆ ಹೆತ್ತೇ ಸಾಕಿ ಸಲಹಿದೆ
ಪ್ರೇಮವಾಹಿನಿ ಹರಿಸಿದೆ
ಮುತ್ತನೀಯುತ ಮಮತೆಯಿಂದಲಿ
ತುತ್ತನಿಕ್ಕುತ ಸಲಹಿದೆ//
ತಪ್ಪಗೈಯ್ಯಲು ಒಪ್ಪದಿಂದಲಿ
ತಿದ್ದಿ ತೀಡುತ ಹರಸಿದೆ
ಸಪ್ಪಗಿರೆ ನಾ ಅಪ್ಪಿ ಒಲವಲಿ
ಒಪ್ಪುವಾ ಕತೆ ಹೇಳಿದೆ//
ಮಾತಿನೊಳಗೇ ಧೈರ್ಯನಿಧಿ ನೀ
ಕೃತಿಗೆ ನೀ ಅನ್ವರ್ಥವು
ಸತ್ಯ ಪಥಕೇ ದಾರಿ ನೀ ನಿಜ
ಮತ್ತೆ ಜೀವನದರ್ಥವು//
ಚಣಚಣವು ನೀ ಮನದಿ ತುಂಬಿರೆ
ಮಾತೆಯಾ ದಿನವೇತಕೆ ?
ನಿನ್ನ ಮಡಿಲೇ ಸಗ್ಗವಾಗಿರೆ
ಬೇರೆ ಸಗ್ಗವದೇತಕೆ ?
ಅಮ್ಮ ನಿನ್ನಯ ಮಡಿಲೊಳಾಡಿದ
ಗಳಿಗೆಯೇತಕೆ ಬಾರದೋ !
ನಿನ್ನ ಪ್ರೇಮದ ಜೋಗುಳವ ನಾ
ಕೇಳೆ ಜೀವನ ಸಾಲದೋ !
ಅಪ್ಪತಾನಾಕಾಶವಾಗಿರೆ
ನೀನೆ ನಿಜದೊಳು ಭೂಮಿಯು
ಬಾಳ ನಂದನದೊಳಗೆ ನೀವಿರೆ
ಬೇರೆ ಏತಕೆ ದೈವವು !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021