ಘನ ಸೃಷ್ಟಿಯೇರಿಳಿತಕಲ್ಲೆ ಪರಿಹಾರಮಿದೆ
ಮನದ ದುಃಖಕೆ ಮನದೆ ಪರಿಹಾರಮುಂಟು !
ಕೊನೆಯೆಂಬುದಿರದಿದಕೆ ನಿತ್ಯ ಹೋರಾಟಮೈ
ಜನನದೊಳೆ ಹನನಮಿದೆ ಜಾಣಮೂರ್ಖ //
ಕೈವಾರ ತಾತಯ್ಯನವರ ಮಾತನ್ನು ನಮ್ಮ ಹಿರಿಯರೊಬ್ಬರು ಯಾವಾಗಲೂ ಹೇಳುತ್ತಿದ್ದರು. ಅದೇನೆಂದರೆ “ಕೋಟಿ ಸಮಸ್ಯಾಲುಕು ಶತಕೋಟಿ ಪರಿಹಾರುಮು” ಎಂದು. ಕೋಟಿ ಸಮಸ್ಯೆಗಳಿದ್ದರೆ ನೂರು ಕೋಟಿ ಪರಿಹಾರಗಳಿರುತ್ತವೆ ಎಂದು ! ಹಾಗೆಯೇ ಸೃಷ್ಟಿಯ ಏರಿಳಿತಗಳಿಗೆ ಅದೇ ಪರಿಹಾರವನ್ನು ಕಂಡುಕೊಳ್ಳುತ್ತದೆ. ಸಮತೋಲನ ಕಾಯ್ದುಕೊಳ್ಳುತ್ತದೆ. ನಾವೇನೂ ಪ್ರಕೃತಿಗಿಂತ ದೊಡ್ಡವರಲ್ಲ ! ಅದರ ಒಂದು ಭಾಗ ಅಷ್ಟೆ. ನಮ್ಮ ಮನದ ದುಃಖಕ್ಕೂ ಅಲ್ಲೇ ಪರಿಹಾರವೂ ಇದೆ. ನಾವು ಸ್ವೀಕರಿಸಲು ಸಿದ್ಧರಿರೋದಿಲ್ಲ ಅಥವಾ ಸಾವಧಾನವಾಗಿ ಚಿಂತಿಸುವ ವ್ಯವಧಾನವಿರೋದಿಲ್ಲ ಅಷ್ಟೆ. ಒಂದು ಮುಗಿಯುತ್ತಿದ್ದಂತೆ ಇನ್ನೊಂದು ! ಇದಕ್ಕೆ ಕೊನೆಯೆಂಬುದೇ ಇಲ್ಲ. ಸಮಸ್ಯೆಗೆ ಒಂದು ಹುಟ್ಟು ಹೇಗಿದೆಯೋ ಹಾಗೆಯೇ ಕೊನೆಯೂ ಇದೆ. ನಾವು ಸುಮ್ಮನೇ ಉದ್ವೇಗಕ್ಕೊಳಗಾಗುತ್ತೇವೆ ಅಷ್ಟೆ. ಜನನದ ಮರು ಕ್ಷಣವೇ ಸಾವಿಗೆ ಹತ್ತಿರವಾಗುತ್ತಿದ್ದೇವೆ ಎಂಬ ಸತ್ಯ ನಮಗೆ ಮನದಟ್ಟಾಗಬೇಕಿದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021