ನಾಕು ಗೋಡೆಯ ನಡುವೆ ನಾಕವರಳಲು ಬೇಕು
ಜೋಕೆ ಜೀವನತತ್ತ್ವವರಿಯಲೇಬೇಕು
ತೂಕ ತಪ್ಪದೆ ನಡೆವ ಪಾಠ ಕಲಿಯಲು ಬೇಕು
ಬೇಕಾದುದೀಬೇಕೊ ಜಾಣಮೂರ್ಖ //
ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆ ಬಹು ಅಪೂರ್ವವಾದದ್ದು. ಕೆಲವನ್ನು ಅಳವಡಿಸಿಕೊಳ್ಳ ಬೇಕಿದೆ. ನಾಕು ಗೋಡೆಯ ನಡುವೆ ನಡೆವ ಪ್ರಕ್ರಿಯೆ ಕೇವಲ ಯಾಂತ್ರಿಕವಾದುದಾಗಿರದೆ ಅಲ್ಲಿ ನಾಕವೇ ಅರಳಬೇಕು. ಸ್ವರ್ಗವು ಅರಳಬೇಕೆಂದರೆ ಅದು ಮಗುವಿನ ಸುಂದರ ಬದುಕಿಗೆ ಸಾರ್ಥಕ ಮಾರ್ಗದರ್ಶನವಾಗಬೇಕು. ಫಲಪ್ರದ ತರಬೇತಿ ಅಲ್ಲಿ ಸಿಗಬೇಕು. ಬದುಕಿನ ತತ್ತ್ವ ಅರಿಯುವ ಪಾರಮಾರ್ಥಿಕ ಚಿಂತನೆಗಳು ನಡೆಯಬೇಕು. ಬದುಕುವುದನ್ನು ಕಲಿಸಬೇಕು ! ಬದುಕಿನ ತೊಡಕುಗಳನ್ನು ಬಿಡಿಸುವ ಸಾರ್ಥಕ ಕಲಿಕೆಯಾಗಬೇಕು. ನಡೆ ನುಡಿಗಳಲ್ಲಿ ತೂಕ ತಪ್ಪದೆ ನಡೆವ ವ್ಯಕ್ತಿತ್ವವನ್ನು ಮಗುವಿಗೆ ಕಟ್ಟಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಗುವಿಗೆ ಏನು ಅಗತ್ಯವಾಗಿ ಬೇಕಿದೆ ಎಂಬುದನ್ನು ಅರಿತು ಅದನ್ನು ಪೂರ್ಣಪ್ರಮಾಣದಲ್ಲಿ ಕಲಿಸಬೇಕಿದೆ. ಉದಾಹರಣೆಗೆ ಒಂದು ಮಗುವಿಗೆ ಸಾಹಿತ್ಯದ ವ್ಯಾಸಂಗದಲ್ಲಿ ತುಂಬಾ ಆಸಕ್ತಿ ಇದೆ ಎಂದಿಟ್ಟುಕೊಳ್ಳೋಣ. ತಂದೆ ತಾಯಿಗಳು ವೈದ್ಯನಾಗಬೇಕೆಂಬ ಒತ್ತಡ ತರಬಾರದು. ಆ ಮಗು ತನಗೆ ಬೇಕಾದುದನ್ನೇ ಆರಿಸಿ ಕಲಿಯುವಂತಾಗಬೇಕು . ಆಗ ನೋಡಿ ಕಲಿಕೆ ಹೇಗಿರುತ್ತದೆ ಮತ್ತೆ ಹಾಗೆ ಮಗುವಿನ ಮುಂದಿನ ಜೀವನ ಹೇಗಿರುತ್ತೆ ಅಂತ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021