ಮಾತಿಗೇಂ ಸೂತಕವೆ ಪ್ರೀತಿಯಾಭರಣಮಿರೆ !
ನೇತಿ ತಾಂ ದೈವ ತಾನಿತ್ತ ಉಡುಗೊರೆಯೊ
ಸ್ವಾತಿ ಮುತ್ತೇಕೆ ಬಿಡು ಸ್ಮಿತವಿರಲು ಮೊಗದಲ್ಲಿ
ಹೇತುವಿವು ಸಂತಸಕೆ ಜಾಣಮೂರ್ಖ //
ಕೆಲವರಂತೂ ಮಾತನಾಡಲು ತುಂಬಾ ಹಿಂದೇಟು ಹಾಕುತ್ತಾರೆ. ಮಾತಿಗೇನಾದರೂ ಸೂತಕವೇನು ? ಅನಂತ ಸೃಷ್ಟಿಯನ್ನೇ ಪ್ರೀತಿಸಲು ಭಗವಂತನು ಪ್ರೀತಿಯನ್ನೇ ನಮಗೆ ಆಭರಣವಾಗಿ ನೀಡಿದ್ದಾನೆ. ಪ್ರೀತಿಯ ಸ್ವರೂಪನೇ ತಾನಾಗಿದ್ದಾನೆ. ನಮ್ಮೋಳಗೇ ಈ ಪ್ರೀತಿಯ ಒಟ್ಟಿಗೆ ಸುಂದರ ಮುಗುಳುನಗೆಯ ಆಭರಣವನ್ನೂ ಇತ್ತಿದ್ದಾನೆ. ಮತ್ತಿನ್ನೇನು ಬೇಕು ! ಅನಂತ ಸೃಷ್ಟಿಯನ್ನು ಪ್ರೀತಿಯಿಂದ ಕಾಣಲು, ಮಾತನಾಡಲು , ಮುಗುಳುನಗಲು ನಮಗೇನು ತೊಂದರೆ ? ಆದರೆ ನಾವು ಆತ್ಮಸಂತೋಷಕ್ಕೆ ಹೇತುವಾದ ಇವುಗಳನ್ನು ಬಿಟ್ಟು ದ್ವೇಷ, ಅಸೂಯೆ , ಲೋಭ ಮೊದಲಾದ ನರಕದಲ್ಲೇ ನರಳುತ್ತೇವೆ. ಗಮನಿಸಿದ್ದೀರಾ ನೀವು! ಕೆಲವರಂತೂ ಮುಖವನ್ನು ಗಂಟಿಕ್ಕಿಕೊಂಡೇ ಇರುತ್ತಾರೆ. ನಕ್ಕರೇನಾದರೂ ನಷ್ಟವಿದೆಯೇನು ? ನೊಂದವರಿಗೆ ನಾಕು ಪ್ರೀತಿಯ ಮಾತು ನಾಕಸದೃಶವಲ್ಲವೆ? ಆದರೆ ನಾವು ಹೀಗೆ ಮಾಡೆವು. ಇದೊಂದು ದೊಡ್ಡ ವಿಪರ್ಯಾಸ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021