ಇನಮೂಡೆ ನನೆಯರಳಿ ಸೌಗಂಧ ಸೂಸುವುದು
ತನದೆಂಬ ಅಹಮಿರದ ಹಕ್ಕಿ ಇಂಚರಮೇನ್
ಘನ ಪಂಚಭೂತಂಗಳೆಲ್ಲ ಮೌನದೊಳಿರಲು
ನನದೆಂಬ ಹುಂಬ ತೊರೆ ಜಾಣಮೂರ್ಖ//
ಮೌನವಾಗಿ ನಾವು ಈ ಪ್ರಕೃತಿಯನ್ನು ಹಾಗೇ ಗಮನಿಸೋಣ. ಸೂರ್ಯನ ಬಿಸಿಲು ಸೋಂಕುವುದೇ ತಡ ಹೂವರಳುತ್ತದೆ. ಸೌಗಂಧವನ್ನು ಪಸರಿಸುತ್ತದೆ ! ಹಕ್ಕಿಗಳು ಗಂಧರ್ವ ಭಾಷೆಯೋ ಎಂಬಂತಹಾ ಸುಂದರ ಉಲಿಯ ಚಲ್ಲುತ್ತವೆ ! ಭಗವಂತನ ಸ್ವರೂಪವೇ ಆದಂತಹಾ ಪಂಚಭೂತಂಗಳು ಸದ್ದು ಮಾಡದೆ ತಮ್ಮ ಕರ್ತವ್ಯಗೈಯ್ಯುತ್ತವೆ ! ಸೂರ್ಯ ಚಂದ್ರರು ಬೆಳಕ ನೀಡುತ್ತಾರೆ , ಗಾಳಿ ಸುಳಿದು ತಂಪೆರೆದು ಕಾಪಾಡುತ್ತದೆ , ನೀರು ಜೀವಜಲವಾಗಿ ಎಲ್ಲರಿಗೂ ಜೀವದಾನ ಮಾಡುತ್ತೆ , ಭೂತಾಯಿ ನಮ್ಮೆಲ್ಲ ಅಸಹ್ಯವನ್ನೂ ಸಹ್ಯ ಮಾಡಿಕೊಂಡು ಆಶ್ರಯ ನೀಡುತ್ತಾಳೆ , ಆಕಾಶವು ಬದುಕಿಗೇ ಇಂಬು ನೀಡುತ್ತದೆ ! ಇಲ್ಲೆಲ್ಲೂ ನನ್ನದು , ನಾನು ಎಂಬ ಲೇಶ ಮಾತ್ರದ ಭಾವವೇನಾದರೂ ಕಾಣುತ್ತಿದೆಯೇ !? ಆದರೆ ಅಣುವಿನಲ್ಲಿ ತೃಣನಾದ ಮನುಷ್ಯ ಮಾತ್ರ ನಾನು , ನನ್ನದು ಎಂದು ಬಡಿದಾಡುತ್ತಾನೆ. ಸ್ವಲ್ಪ ಯೋಚಿಸಿ ಗೆಳೆಯರೇ ! ಏಕಿಂತಹಾ ವರ್ತನೆ ನಮ್ಮದು !? ಅಖಂಡ ಸೃಷ್ಟಿಗೆ ಸೃಷ್ಟಿಯೇ ಅಹಂಕಾರ ರಹಿತವಾಗಿ ನಡೆಯುತ್ತಿರುವಾಗ ನಮ್ಮ ಇಂತಹಾ ಗುಣ ಸೃಷ್ಟಿಯಲ್ಲಿ ತುಂಬಾ ವ್ಯತಿರಿಕ್ತ , ವಿಭಿನ್ನ ಎನಿಸುವುದಿಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021