ಪ್ರೇಮಮಯವೀ ಧರ್ಮ ಪಾಮರರು ಅರಿಯದಲೆ
ಕಾಮಕ್ರೋಧಾದಿಗಳ ವಶವಾದೊಡೇನು !?
ಕಾಮಿತಾರ್ಥಕೆ ಮನದಿ ಬಡಿದು ಕಾದಲು ಪರಂ
ಧಾಮಕೇಂ ನಷ್ಟ ಪೇಳ್ ಜಾಣಮೂರ್ಖ//
ಯಾವ ಧರ್ಮವೇ ಆಗಲಿ ನಿರ್ವ್ಯಾಜ ಪ್ರೇಮದಿಂದಲೂ , ಅಹಿಂಸೆಯನ್ನಾಚರಿಸುತ್ತಲೂ ಬದುಕಬೇಕು ಎಂದೇ ಸಾರುತ್ತವೆ. ಆದರೆ ಅಂತಹಾ ಧರ್ಮ ಸಾರಥಿಗಳು ಕಾಮಕ್ರೋಧಾದಿಗಳ ವಶರಾಗಿ ದ್ವೇಷಾಸೂಯೆಗಳ ಕಿಚ್ಚು ಹಚ್ಚುತ್ತಿರುವುದು ದೊಡ್ಡ ವಿಪರ್ಯಾಸವೇ ಸರಿ. ಇದರಿಂದ ಸ್ವಯಂ ದೈವವೇ ಆಗಿರುವ ದೈವಪ್ರೇಮಕ್ಕೆ ಯಾವ ನಷ್ಟವೂ ಇಲ್ಲ. ಆದರೆ ನಾವು ನಮ್ಮ ಕಾಮಿತಾರ್ಥಂಗಳನ್ನು ಪಡೆಯಲು ಮತ್ತೆ ನಾನೆಂಬ ಅಹಮ್ಮಿನ ಕಾರಣದಿಂದ ಧರ್ಮವನ್ನು ಮುಂದಿಟ್ಟುಕೊಂಡು ಎಷ್ಟು ಶಾಖೆಗಳು , ಕವಲುಗಳನ್ನು ಕಟ್ಟಿದ್ದೇವೆ ನೀವೇ ನೋಡಿ ! ಎಲ್ಲಿ ಹೋಯಿತು ಪ್ರೇಮೋದ್ಯಾನದಲ್ಲಿ ಅರಳಿದ ಪುಷ್ಪಗಳ ದಿವ್ಯ ಸೌಗಂಧ ! ಸಹಿಸಲಾಗದ ಘಾಟೇಕೆ ಇಂದು !? ಅದರ ದೈವಕಳೆ ಎತ್ತ ಸಾಗಿತು !? ಅನಂತ ಪ್ರೇಮವನ್ನು ಸಾರಿ ಹೇಳಿದ ಬುದ್ಧ , ಕ್ರಿಸ್ತ , ಪೈಗಂಬರ ಇತ್ಯಾದಿ ಸಂತರೆಲ್ಲರ ಬೋಧನೆಗಳೆಲ್ಲ ಏನಾದವು !? ಅವೆಲ್ಲಾ ಪುಸ್ತಕದಲ್ಲಿವೆ ! ಸಿದ್ಧಾಂತ ರೂಪದಲ್ಲಿ ! ಭೂಲೋಕವು ದೇವಲೋಕವಾಗುವುದು ಯಾವಾಗ ಎಂದರೆ ಅವುಗಳು ಬದುಕಿನಲ್ಲಿ ಅನುಷ್ಠಾನಗೊಂಡಾಗ, ಅಳವಡಿಸಲ್ಪಟ್ಟಾಗ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021