ಸರಳತೆಯು ಮರೆಯಾಗಿ ಸಂಕೀರ್ಣ ಬದುಕಾಗಿ
ವರವಾದ ಮುಖಭಾವ ಮುಖವಾಡವಾಗಿ
ಮರೆಮಾಡಿ ದುಗುಡಗಳ ತೋರ್ದೊಡೇಂ ಸಂತಸವ
ತೊರೆದು ಪೋಪುದೆ ಕರ್ಮ ಜಾಣಮೂರ್ಖ //
ಸ್ನೇಹಿತರೇ , ಸರಳತೆಯಲ್ಲಿ ಸರಳತೆಯನ್ನು ಮೆರೆದು ಬದುಕುವವನು ಅತ್ಯಂತ ಸುಖಿ. ಮಾನಸಿಕವಾಗಿ ಅವನು ತುಂಬಾ ಪಕ್ವತೆ ಪಡೆದಿರಬೇಕಾಗುತ್ತದೆ. ನಾನು ಸರಳವಾಗಿ ಬದುಕುತ್ತಿದ್ದೇನೆ ಎನ್ನುವುದು ತೋರಿಕೆಯಂತೂ ಸಾಧ್ಯವೇ ಇಲ್ಲ.ಕೃತಕತೆ ಎದ್ದು ಕಾಣುತ್ತಿರುತ್ತದೆ. ಅಲ್ಲವೇ !? ಕ್ಷಮಿಸಿಬಿಡಿ -” ನಭ್ರೂಯಾತ್ ಸತ್ಯಮಪ್ರಿಯಂ” (ಅಪ್ರಿಯವಾದ ಸತ್ಯವನ್ನು ಹೇಳಬಾರದು ) ಎಂದು ಜಗತ್ತಿನ ಏಕಮಾತ್ರ ಗುರು ಶ್ರೀಕೃಷ್ಣನೇ ಹೇಳಿದ್ದಾನೆ. ಆದರೆ ಹೇಳದೇ ಇರಲಾಗುತ್ತಿಲ್ಲ. ಇಂದು ಸರಳತೆ ಮರೆಯಾಗುತ್ತಿದೆ. ಸಂಕೀರ್ಣತೆ ಮನೆ ಮಾಡಿದೆ. ಬೇಡವೆಂದರೂ ಮನವು ಅತ್ತಲೇ ಸಾಗುತ್ತದೆ ಮುಖಭಾವವು ಮಾನವನಿಗೆ ದೈವದತ್ತವಾದ ವರ. ಆದರೆ ಇಂದು ಅದು ಮುಖವಾಡದ ಹಿಂದಿದೆ. ನೈಜ ಮುಖಭಾವ ಮರೆಯಾಗಿದೆ. ಪ್ರತಿಷ್ಠೆಯ ಪ್ರಶ್ನೆಯಂತೆ ಎಲ್ಲರೂ ತಮ್ಮ ತಮ್ಮ ದುಃಖಗಳನ್ನು ತೋರಿಸಿಕೊಳ್ಳದೆ ಚಂದವಿರುವವರಂತೆ ನಟಿಸುತ್ತಿದ್ದಾರೆ. ಹೀಗೆ ನಟಿಸಿ ಸಂತಸದ ಮುಖಭಾವ ಪ್ರದರ್ಶಿಸಿಬಿಟ್ಟರೆ ಅನುಭವಿಸಬೇಕಾದ ಕರ್ಮವಾದರೂ ನಮ್ಮನ್ನು ತೊರೆದು ಹೋಗುತ್ತದೇನು ? ಖಂಡಿತ ಇಲ್ಲ. ಅವಶ್ಯವಾಗಿ ಅನುಭವಿಸುವುದನ್ನು ಅನುಭವಿಸಲೇ ಬೇಕು. ಬಡವನಾಗಲಿ ಅಥವಾ ಸಾರ್ವಭೌಮನಾಗಲಿ ಯಾರೂ ಇದರಿಂದ ಹೊರತಲ್ಲ. ಮತ್ತೆ ಮೊಗವಾಡವೇಕೆ !? ಪ್ರೀತಿಯಿಂದ ಸ್ನೇಹಮಯರಾಗಿ ಬದುಕೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021