ವಿಗಡ ಬೆಡಗೀ ಬಾಳು ಸೊಗಡರಸಿ ಪುಗುವೇಕೆ
ಸೊಗಮಿಹುದು ಕಾಣದೈ ಸಗ್ಗ ಬರಿ ಶೋಧ!
ಬಗೆಬಗೆಯ ಕಲ್ಪನೆಯೊಳದ್ದಿ ಕಂಗೆಡದೆ ಮೊಗೆ
ಮೊಗೆ ಸಗ್ಗಮೆದೆಯೊಳಗೊ ಜಾಣಮೂರ್ಖ//
ವಿಗಡ ಅಂದರೆ ಶ್ರೇಷ್ಠ ಎಂಬರ್ಥವೂ ಇದೆ , ಭೀಕರ , ಭಯಂಕರ ಎಂಬರ್ಥವೂ ಇದೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತೆ ಈ ಬದುಕು. ಏಕೆಂದರೆ ಬದುಕಿನ ಸೊಗಡು ಏನೆಂದು ಅರಸಿ ಹೋಗುತ್ತೇವೆ ನಾವು. ಹಾಗೆ ಹೋಗುವುದೇನೂ ಬೇಡ. ಅದು ಬಂದ ಹಾಗೆ ಸ್ವೀಕಾರ ಮಾಡಿದರೆ ಅಷ್ಟೇ ಸಾಕು. ಮತ್ತೆ ಸ್ವರ್ಗ ಹೇಗಿರುತ್ತೆ !? ನರಕ ಹೇಗಿರುತ್ತೆ !? ಎಂಬ ಬಗೆಬಗೆಯ ಕಲ್ಪನೆಗಳು , ಊಹೆಗಳಲ್ಲಿ ಅದ್ದಿ ಮುಳುಗಿ ಬರೀ ಜಿಜ್ಞಾಸೆಗಳಲ್ಲೇ ಬದುಕೋದಕ್ಕಿಂತ ಅವು ಇದ್ದರೆ ಇರಲಿ ಬಿಡಿ. ಇದ್ದರೆ ಯಾವುದಾದರೂ ಒಂದಂತೂ ನಿಶ್ಚಿತವಾಗಿ ಸಿಕ್ಕೇ ಸಿಗುತ್ತದೆ. ಸಂತಸದಿಂದ ಒಳಿತನಾಚರಿಸಿದರೆ ಅದೇ ಸಗ್ಗ ! ಕೆಡುಕು ತುಂಬಲದೇ ನರಕ. ಈ ಕಲ್ಪನೆಗಳಲ್ಲಿ ಮುಳುಗಿ ಕಂಗೆಡದೆ ಮೊಗೆ ನಿನ್ನದೆಯೊಳಗಿನಾನಂದವನು. ಮೊಗೆದಷ್ಟೂ ಸಂತೋಷವು ಹೆಚ್ಚುತ್ತದೆ ಕಣಯ್ಯ ಗೆಳೆಯ. ಸ್ವರ್ಗ ನರಕಗಳೆಲ್ಲವೂ ನಿನ್ನೊಳಗೇ ಇವೆ. ಅನುಭವಿಸುವವನು ನೀನೆ , ಆಯ್ಕೆಯೂ ನಿನ್ನದೇ ! ನಾವು ಸರಿಯಾಗಿ ಆಯ್ಕೆ ಮಾಡಿಕೊಳ್ಳದೆ ವಿಧಿಯನ್ನು ದೂರಿದರೆಂತು !? ಅಲ್ಲವೇ ಗೆಳೆಯರೇ.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021