ನಾಳೆಗಳನಿಟ್ಟವನು ಕೂಳಿಗಿಟ್ಟಿಹ ದಾರಿ
ಪಾಳಿ ಬರುವನಕ ತಾಳ್ ಗೋಳಾಟವೇಕೆ ?
ದಾಳವಿಹುದೆಂತೊ ವಿಧಿಯಾಟವರಿತವರಾರು ?
ತಾಳು ಉಬ್ಬೆಗವೇಕೆ ಜಾಣಮೂರ್ಖ//
ನಾವುಗಳು ಪ್ರತಿಯೊಬ್ಬರೂ ಈ ಮುಕ್ತಕದ ಆಳಕ್ಕಿಳಿದು ಬಿಟ್ಟರೆ ಜಗತ್ತು ರಾಮರಾಜ್ಯವಾಗಿಬಿಡುತ್ತೆ. ಆದರೆ ಆಳಕ್ಕಿಳಿಯಬೇಕಷ್ಟೆ. ಓ, ಗೆಳೆಯ ವಿಧಿ ನಿನಗೆ ನಾಳೆಯನ್ನು ಕೊಟ್ಟಿದೆ ಎಂದ ಮೇಲೆ ನಿನಗೊಂದು ಬದುಕಿನ ದಾರಿಯನ್ನು ಕೊಟ್ಟೇ ಇರುತ್ತದೆ. ಬದುಕು ಬಂದಂತೆ , ದಾರಿ ಕೊಟ್ಟಂತೆ ನಡೆಯೋಣ. ಕಿಂಚಿತ್ ಪ್ರಯತ್ನವಿರಲಿ. ಆದರೆ ಅದಕ್ಕಾಗಿ ಗೋಳಾಡುವುದಾದರೂ ಏಕೆ ? ವಿಧಿಯ ಎಣಿಕೆಯೆಂತೋ ಅರಿತವರು ಯಾರು ? ಸ್ವಯಂ ಶ್ರೀಮನ್ನಾರಾಯಣನೇ ವಿಧಿಯ ದಾಳಕ್ಕೆ ತುತ್ತಾಗಲಿಲ್ಲವೇ !? ಇನ್ನು ನಾವು ನೀವು ತಪ್ಪಿಸಿಕೊಳ್ಳಲಾದೀತೆ !? ಸುಮ್ಮನೇ ಉದ್ವೇಗ ಪಡುವುದಾದರೂ ಏಕೆ ? ಉದ್ವೇಗ ಪಟ್ಟಾಕ್ಷಣ ವಿಧಿ ಬದಲಾಗುವುದೇನು ? ಓ ಗೆಳೆಯ ಒಳಿತನ್ನು ಬಯಸು , ಒಳಿತನ್ನೇ ಮಾಡು, ಬದುಕಿನಲ್ಲಾಗ ಒಳಿತೇ ಆಗುವುದು. ಇದರಲ್ಲಿ ಸಂಶಯವಿಲ್ಲ. ತಾಳ್ಮೆಯಿಂದಿರು. ಇಲ್ಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಆಗುತ್ತದೆ. ಎಲ್ಲರಿಗೂ ಬಂದಂತೆ ನಮಗೂ ನಾಳೆ ಪಾಳಿ ಬಂದೇ ಬರುತ್ತದೆ. ಮತ್ತೆ ಉಬ್ಬೆಗವಾದರೂ ಏಕೆ ! ಅಲ್ಲವೇ ಗೆಳೆಯರೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021