ಬೀಳ್ವುದೇನೇಳ್ವುದೇನೀಸೀಸಿ ಸೋಲ್ವುದೇ
ನಾಳ್ವಂತ ಪರಿಯುಮೇಂ ಪೇಳ್ವ ಪಾಂಗೆಂತು !
ತಾಳ್ವಿಕೆಯ ಆಳದೊಳಗೇಂ ಸ್ವಾರ್ಥದಾ ಸೆಳೆತ
ಬಾಳ್ವೆಂದರಿದೆಯೇನೊ ಜಾಣಮೂರ್ಖ //
ಸ್ನೇಹಿತರೇ , ಗುರುವಿತ್ತ ಈ ನುಚ್ಚಿನ ನುಡಿಯನ್ನು ಒಮ್ಮೆ ಗಂಭೀರವಾಗಿ ಪರಿಗಣಿಸಿ. ನಿಮ್ಮನ್ನೊಮ್ಮೆ ನೀವೇ ನೋಡಿಕೊಳ್ಳಿ ! ಬದುಕಿನಲ್ಲಿ ಒಮ್ಮೆ ಏಳುತ್ತೇವೆ , ಮತ್ತೊಮ್ಮೆ ಬೀಳುತ್ತೇವೆ. ಈ ಬಾಳ ಸಾಗರದಲ್ಲಿ ಈಸೀ ಈಸೀ ಸೋಲುತ್ತೇವೆ. ಸೋತರೂ ರಕ್ತಗುಣ ! ನಿರಂಕುಶತ್ವ , ಅಹಂಕಾರ ಮಾತ್ರ ಹೋಗೋದೇ ಇಲ್ಲ. ನಮ್ಮ ಮಾತಿನ ಗತ್ತು ಗೊತ್ತಿಲ್ಲದೆಯೇ ನಮ್ಮಲ್ಲಿರುವ ಅಹಂಕಾರವನ್ನು ತೋರಿಸುತ್ತಿರುತ್ತದೆ. ಕೆಲವರನ್ನು ನೋಡಿ ! ಅವರಿಗೆಂತಹಾ ತಾಳ್ಮೆ ! ಆ ತಾಳ್ಮೆಯ ಆಳದಲ್ಲಿ ಎಂತಹಾ ಸ್ವಾರ್ಥದ ಸೆಳೆತ ಇರುತ್ತೆ ಅಂದರೆ ! ಅದು ನಮ್ಮ ವ್ಯಕ್ತಿತ್ವದ ಉದಾತ್ತತೆಯನ್ನು ಬಿರುಗಾಳಿಯು ತೂರಿ ಬಿಸಾಡುವ ತರಗೆಲೆಯಂತೆ ತೂರಿಬಿಡುತ್ತದೆ. ಎಂತಹಾ ಸ್ವಾರ್ಥವಿದು ! ಇತ್ತೀಚೆಗೆ ಇಂತಹಾ ಸ್ವಾರ್ಥಕ್ಕೆ ‘ಸ್ವಾಭಾವಿಕ ಇದು ಬಿಡಿ’ ಎಂಬ ಸ್ವೀಕಾರ ಬೇರೆ !! ಇದೇಯೇನು ಬಾಳೆಂದರೆ !? ಅಲ್ಲ ಕಣಯ್ಯ ಗೆಳೆಯ , ಇದಲ್ಲ. ಅದು ನುಡಿಯನ್ನು ಮೀರ್ದುದು. ಅನುಭವದಿಂದಲೇ ಅರಿತು ಬದುಕಿನಲ್ಲಿ ಪಕ್ವವಾಗಬೇಕು. ಆಗದಿದ್ದರೆ ಎಳಸಾಗಿಯೇ ಪೂರಾ ಬದುಕನ್ನು ಕಳೆದು “ನಾನೂ ಬದುಕಿದ್ದೆ” ಅಂತ ಬದುಕುತ್ತೇವೆ ಅಷ್ಟೇ. ಅದೂ ಒಂದು ಸ್ವಾರಸ್ಯವೇನು ? ಬದುಕಿನ ಆಳಕ್ಕಿಳಿದು ಇದರ ಉದ್ದೇಶ , ಆಂತರ್ಯವನ್ನರಿತು ಬದುಕೋದಿದೆಯಲ್ಲಾ ! ಅದು ನಿಜವಾದ ಬದುಕು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021