ರಾಮನೆನ್ನುತ ಕಡಲ ಮಳಲೊಳಾಡುತಲೆದ್ದು
ರಾಮಸೇತುವ ಕಟ್ಟಿ ಧನ್ಯವಾಯ್ತಳಿಲು !
ಭೀಮಕಾಯವದೇಕೆ ನೇಮದಿಂ ಗೈಯ್ದೊಡದು
ರಾಮಸಖ್ಯಕೆ ಹೇತು ಜಾಣಮೂರ್ಖ //
ಶ್ರೀರಾಮ ಸೇತುವೆಯನ್ನು ಕಟ್ಟುವಾಗ ಅಳಿಲೊಂದು ನೀರಿನಲ್ಲಿ ನೆಂದು ಮರಳಿನಲ್ಲಿ ಆಡಿ ತನಗಂಟಿದ ಮರಳಿನ ಕಣಗಳನ್ನು ತಂದು ಬಂಡೆಗಳ ಸಂದುಗಳಿಗೆ ಕೊಡವಿ ತನ್ನದೇ ಆದ ಪರಿಯಲ್ಲಿ ಸೇವೆಗೈಯ್ಯುತ್ತಿತ್ತು. ರಾಮಸೇತುವಿನ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ಹೀಗೆ ಅರ್ಪಿಸಿಕೊಂಡಿತ್ತು. ಶ್ರೀರಾಮನಾದರೋ ಅದರ ಸೇವೆಯನ್ನು ಕಂಡು ಅತ್ಯಂತ ಪ್ರೇಮದಿಂದ ಅದರ ಮೈದಡವಿದ. ರಾಮನ ಕೈಬೆರಳ ಗೆರೆಗಳು ಅದರ ಬೆನ್ನ ಮೇಲೆ ಮೂಡಿದವು. ಅದರ ಸೇವೆ ಘನವಾಗಿತ್ತು. ಅಳಿಲಸೇವೆ ಎಂದೇ ಇಂದಿಗೂ ಪ್ರಸಿದ್ಧವಾಗಿದೆ. ಭೀಮಕಾಯವಿದ್ದರೇನು ನೇಮದಿಂದ , ನಿಷ್ಠೆಯಿಂದ ಕಾರ್ಯವೆಸಗದ ಮೇಲೆ !? ವ್ಯರ್ಥವಷ್ಟೆ. ನಿಷ್ಠೆಯಿದ್ದರೆ ಅಲ್ಲಿ ಜೀವದೇವರ ಸಮಾಗಮವಾಗುತ್ತದೆ. ಅದರ ಆನಂದವೇ ಬೇರೆ. ಅದಕ್ಕೆ ಮೇಲಿನ ಈ ಪೌರಾಣಿಕ ಉಲ್ಲೇಖವೇ ಸಾಕ್ಷಿ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021