ಪಣತಿಯಿಂ ಪಣತಿಯೊಲು ಗುರುವಿನಿಂದಲೆ ಗುರುವು
ಕಣಕಣದಿ ತುಂಬಿಹುದು ನಿಷ್ಕಾಮ ಕರ್ಮ !
ದಣಿವರಿಯದೆದೆ ಬಡಿತ ದಾರಿಯಲ್ಲವೆ ಬಾಳ್ಗೆ !
ಕಣಿಯೇಕೆ ಕಾಯಕಕೆ ಜಾಣಮೂರ್ಖ //
ಎಷ್ಟು ಸುಂದರ ಈ ಸತ್ಯ ! ಒಂದು ಹಣತೆಯಿಂದ ಮತ್ತೊಂದು ಹಣತೆ ಬೆಳಗುವಂತೆ ಒಬ್ಬ ಗುರುವಿನಿಂದ ಮತ್ತೊಬ್ಬ ಗುರು ಲೋಕವನ್ನು ಅರಿವಿನ ಬೆಳಕಿನಿಂದ ಬೆಳಗುತ್ತಾನೆ. ಸಾವಧಾನವಾಗಿ ಬಾಳಿನ ಏಳು ಬೀಳುಗಳನ್ನು ದಾಟಿಸುತ್ತಾನೆ. ಅದೆಂತಹಾ ನಿಷ್ಕಾಮ ಕರ್ಮ ಅಲ್ಲಿ ನಡೆಯುತ್ತದೆ ಗೊತ್ತೆ !? ಜಗತ್ತನ್ನು ಶಾಂತಿ ಸಮಾಧಾನಗಳೆಡೆಗೆ ಕೊಂಡೊಯ್ಯುವುದೇ ಇಲ್ಲಿನ ಪರಮಗುರಿ. ಹೃದಯವು ಸೋತೆ ಬಳಲಿದೆ ಎನ್ನದೇ ಕೆಲಸ ಮಾಡುತ್ತಿದೆ ತಾನೆ ? ಅದರ ಫಲವೇ ನಮ್ಮ ಬದುಕು ! ಹಾರಾಟ , ಹೋರಾಟ ಎಲ್ಲವೂ ! ಅದೊಮ್ಮೆ ತನ್ನ ಕೆಲಸ ನಿಲ್ಲಿಸಿದರೆ ಮಗಿಯಿತು . ಎಲ್ಲವೂ ಸ್ತಬ್ಧ. ಬದುಕಿಗೊಂದು ಪೂರ್ಣ ವಿರಾಮ. ಹೀಗೇ ಇಡೀ ಸೃಷ್ಟಿಯೇ ನಡೆಯುತ್ತಿರುವಾಗ ನಮ್ಮ ಪಾಲಿನ ಕಾಯಕವನ್ನು ಮಾಡೋಣ. ಅದಕ್ಕೆ ಕಣಿಯೊದರುವುದಾದರೂ ಏಕೆ ? ಅಲ್ಲವೇ? ನಮ್ಮ ಕರ್ಮವನ್ನು ನಾವು ನಿಷ್ಠೆಯಿಂದ ಮಾಡೋಣ. ಫಲಾಫಲಗಳನ್ನು ಭಗವಂತನಿಗೆ ಬಿಡೋಣ. ಒಟ್ಟಿನಲ್ಲಿ ಈ ಬದುಕೊಂದು ತಪಸ್ಸು , ಬನ್ನಿ ಇದನ್ನು ನೇಮದಿಂದ ನಡೆಸೋಣ ಮತ್ತು ಮುನ್ನಡೆಯೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021