ಭೇದ ಮೀರಿದ ಶಬರಿ ಸ್ವಾದಿಸಿತ್ತಳು ಹಣ್ಣ
ಮೋದದೊಳು ಮೆದ್ದನೈ ಶ್ರೀರಾಮಚಂದ್ರ
ವೇದ ಪುರುಷನುಮಿತ್ತುದೇನಿರಲಿಮರ್ತಿಯಿಂ
ಮೋದದೊಳಗರ್ಪಿಸೈ ಜಾಣಮೂರ್ಖ//
ಶಬರಿ ಶ್ರೀರಾಮಚಂದ್ರನಿಗಾಗಿ ವರ್ಷಗಟ್ಟಲೆ ಅನನ್ಯ ಭಕ್ತಿಯಿಂದ ಸ್ಮರಿಸುತ್ತಾ, ಕಾಡಿನಲ್ಲೇ ಕಾಯುತ್ತಾ , ಅವನು ತನ್ನ ಪರ್ಣಶಾಲೆಗೆ ಆಗಮಿಸಿದಾಗ ಭಕ್ತಿಯ ಶಿಖರದಲ್ಲಿದ್ದ ಆ ತಾಯಿ ತಾನು ಶ್ರೀ ರಾಮನಿಗಾಗಿ ತಂದ ಬಾರೆ ಹಣ್ಣುಗಳನ್ನು ಪ್ರೀತಿಯಿಂದ ತಾನು ಮೊದಲು ಆಸ್ವಾದಿಸಿ ಆನಂತರ ತನ್ನ ಆರಾಧ್ಯನಿಗೆ ನೀಡುತ್ತಾಳೆ. ಅದು ಎಂಜಲೆಂಬ ಭಾವವನ್ನು ಮೀರಿದ ರಾಮಚಂದ್ರನು ಅದನ್ನು ಸ್ವೀಕರಿಸಿ, ಆಸ್ವಾದಿಸಿ ಧನ್ಯನಾಗುತ್ತಾನೆ. ಶಬರಿಗೆ ಮೋಕ್ಷವನ್ನು ಕರುಣಿಸುತ್ತಾನೆ. ಅದರಲ್ಲಿದ್ದ ಅನಂತವಾದ ಪ್ರೀತಿಯ ಸವಿಯನ್ನು ಅನುಭವಿಸುತ್ತಾನೆ. ಮುಂದಿನ ಕಥೆ ಎಲ್ಲರಿಗೂ ಗೊತ್ತು. ಈಗ ಇಲ್ಲಿ ಮುಖ್ಯವೇನೆಂದರೆ ಶಬರಿಯ ಭಕ್ತಿ ಮಾತ್ರ. ಶಬರಿಗೆ ಈ ಸೃಷ್ಟಿ ಹಣ್ಣುಗಳನ್ನು ಕೊಟ್ಟಂತೆ ಎಲ್ಲರಿಗೂ ಕೊಟ್ಟಿದೆ. ಆದರೆ ಭಗವಂತನಿತ್ತುದನ್ನು ಮತ್ತೆ ಅವನಿಗೇ ಅರ್ಪಿಸುವ ಭಾವವಿದೆಯಲ್ಲಾ ಅದು ತುಂಬಾ ಮುಖ್ಯ. ಭಗವಂತ ನನಗೇನು ಕೊಟ್ಟಿದ್ದಾನೆ ಮತ್ತೆ ಅದನ್ನು ಮೀರಿದ ಭಕ್ತಿ ಹಾಗೂ ಕೃತಜ್ಞತಾ ಭಾವದಿಂದ ನಾನು ಹೇಗೆ ಅರ್ಪಿಸಿದೆನೆಂಬುದೇ ಮುಖ್ಯ. ನಾನಿತ್ತೆನೆಂಬ , ನಾ ತಂದೆನೆಂಬ ಭಾವವು ಲವಲೇಶ ಮಾತ್ರವೂ ಇರಬಾರದು. ಲೌಕಿಕ ಅಪೇಕ್ಷೆಗಳನ್ನು ಮೀರಿರಬೇಕು. ದೈವವಿತ್ತುದನ್ನು ದೈವಕ್ಕೆ ನೀಡಬೇಕಷ್ಟೆ. ಹಾಗೆ ನೀಡುವಾಗ ಅದರ ಜೊತೆ ನಮ್ಮ ಭಕ್ತಿ , ಪ್ರೀತಿ ಹಾಗೂ ತದಾತ್ಮ್ಯ ಭಾವದೊಂದಿಗೆ ನೀಡಿದಾಗ ಭಗವಂತನಿಗೆ ಅದು ಬಹು ಪ್ರೀತಿಯ ನೈವೇದ್ಯವಾಗುತ್ತೆ. ಭಗವಂತ ಎಷ್ಟು ಸಂತೋಷಗೊಳ್ಳುತ್ತಾನೋ ! ನನಗೆ ಅದರ ಅಂದಾಜಿಲ್ಲ. ಆದರೆ ನಮ್ಮ ಆತ್ಮ ಹೊಂದುವ ಆನಂದವಂತೂ ಬಣ್ಣಿಸಲಸದಳ ! ನಾನೆಂಬ ಭಾವ ಅಳಿದಿರಬೇಕಷ್ಟೆ. ಕೆರೆಯ ನೀರನ್ನು ಕೆರೆಗೆ ಚಲ್ಲುವಾಗ ತುಂಬಿದ ಮನಸ್ಸಿನಿಂದ ನೀಡಬೇಕಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021