ಯಜ್ಞದಿ ಹವಿರ್ಭಾಗ ಪಡೆದು ಹರಸಲು ಸುರರು
ಅಜ್ಞಾನವಳಿದು ಧರೆ ಕಂಗೊಳಿಸಿತಂದು !
ಸುಜ್ಞಾನದಿಂ ಹಸಿವಿಗನ್ನವಿಕ್ಕದೆ ಹವಿಯು
ಧರೆಯ ಪೊರೆಯದೆಯಜ್ಞ ಜಾಣಮೂರ್ಖ //
ಹಿಂದಿನ ಯುಗಗಳಲ್ಲಿ ಋಷಿಗಳು, ಮುನಿಪುಂಗವರು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗ (ಹವಿಸ್ಸು)ವನ್ನು ಪಡೆದು ಅಷ್ಠದಿಕ್ಪಾಲಕರಾದಿಯಾಗಿ ಸಮಸ್ತ ದೇವತೆಗಳೂ ಸಂತುಷ್ಟತಾಗಿ ಹರಸುತ್ತಿದ್ದರು. ಅದರ ಪರಿಣಾಮವಾಗಿ ಇಳಗೆ ಮಳೆಬೆಳೆಯಾಗಿ ಸಮೃದ್ಧಿಯಿಂದ ಜನ ಬದುಕುತ್ತಿದ್ದರು. ಯಜ್ಞಯಾಗಾದಿಗಳ ಫಲವಾಗಿ ಪ್ರಕೃತಿ ಶುದ್ಧವಾಗಿಯೂ , ನಿರ್ಮಲವಾಗಿಯೂ ಇತ್ತು. ಮನಸ್ಸಿನ ಅಜ್ಞಾನ ದೂರವಾಗಿ ಧರೆಯೇ ಕಂಗೊಳಿಸಿತ್ತು. ಭೂತಾಯಿ ಇಂತಹಾ ಮಕ್ಕಳನ್ನು ಪಡೆದ ನಾನು ಧನ್ಯೆ ಎಂದು ನೆಮ್ಮದಿಯಿಂದಿದ್ದಳು. ಇಂದು ! ಯಾಗ, ಯಜ್ಞ , ಹವಿಸ್ಸುಗಳ ಮಾತು ಹಾಗಿರಲಿ , ಕಡೇ ಪಕ್ಷ ಪ್ರಕೃತಿಯನ್ನು ರಕ್ಷಿಸಬೇಕೆಂಬ ಕಿಂಚಿತ್ ಜಾಗೃತಿಯೂ ನಮ್ಮಲ್ಲಿಲ್ಲವಾಗಿದೆ. ಇನ್ನು ದೇವತೆಗಳಾಗಲಿ , ಅಷ್ಠದಿಕ್ಪಾಲಕರುಗಳಾಗಲಿ ನಾವು ಹವಿಸ್ಸು ಕೊಡಲೆಂದು ಎಂದೂ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಅವರ ಕೆಲಸವನ್ನು ಅವರು ನಿಸ್ಪೃಹರಾಗಿ ಮಾಡುತ್ತಾರೆ, ಮಾಡುತ್ತಿದ್ದಾರೆ ಬಿಡಿ . ಅದಕ್ಕೇ ಅವರನ್ನು ದೇವತೆಗಳೆನ್ನುವುದು ! ಹಸಿದವರಿಗೆ ಒಂದಿಷ್ಟು ಅನ್ನ ನೀಡೋಣ ಅದು ಈ ಕಲಿಯುಗದಲ್ಲಿ ಹವಿಸ್ಸಿಗೆ ಸಮ ! ಮಾಲಿನ್ಯದಿಂದ ಭೂತಾಯಿಯನ್ನು ರಕ್ಷಿಸೋಣ ಭೂಮಾತೆಯ ಮಕ್ಕಳಾಗಿ ಇದು ನಮ್ಮ ಕರ್ತವ್ಯ.ಸ್ವಸ್ಥಿತಿ ಕಾಯ್ದುಕೊಂಡು ಮುಂದಿನ ಮಾಲಿನ್ಯ ನಿಲ್ಲಿಸಿದರೆ ಸಾಕು. ಆ ತಾಯಿ ಧನ್ಯೆ ! ಅಖಂಡ ಸೃಷ್ಟಿಯನ್ನು ಪ್ರೀತಿಯಿಂದ ಕಂಡು ಅದರೊಟ್ಟಿಗೆ ಬದುಕಬೇಕಿದೆ. ಬೇರೆಲ್ಲವೂ ಸುಮ್ಮನೆ ಅಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021