ಸಾರ್ದವೈ ಜಗದಷಡ್ರಸಗಳಂ ಪೀರ್ದು ಬಲು
ತೋರ್ದವೈ ಧನ್ಯತೆಯನಾರ್ದ್ರತೆಯೊಳುಂಡು
ಸಾರ್ದರೇಂ ಪೀರ್ದರೇಂ ಕಾಣದಿರೆ ಧನ್ಯತೆಯ
ಆರ್ದ್ರತೆಯದೆಲ್ಲಿಯದೊ ಜಾಣಮೂರ್ಖ //
ನಮ್ಮ ಶಾಲೆಯ ಬಳಿ ಒಂದು ಚಿಕ್ಕ ಕಾಡಿನಂತಿರುವ ವನವಿದೆ. ಸುಮಾರು 20-50ಜಾತಿಯ ಮರಗಿಡಗಳು ಅಲ್ಲಿವೆ. ಇಂದು ಅಲ್ಲೊಂದು ದೊಡ್ಡ ಕೇರೇಹಾವನ್ನು ನೋಡಿದೆವು. ಅದರ ಬದುಕು ನಿರಾತಂಕವಾಗಿ ಸಾಗಿದೆ. ಅಲ್ಲಿರುವ ಐದಾರು ಇಲಿಗಳ ಗುಂಪನ್ನು ಅದು ಓಡಿಸಿಯಾಡುತ್ತಿತ್ತು. ಪುಟ್ಟ ಹಕ್ಕಿ ಪಕ್ಷಿಗಳು ಅದನ್ನು ಕಂಡು ಬೆದರಿದ್ದವು. ಅವುಗಳಿಗೆ ಅದು ಸಾಮಾನ್ಯವಾದರೂ ನಮಗೆ ಅದೊಂದು ರೋಚಕ ದೃಶ್ಯವೇ ಆಗಿತ್ತು. ನಮ್ಮ ಇರುವಿಕೆಯನ್ನು ಗಮನಿಸಿದೊಡನೆ ಆ ಹಾವು ಎಲ್ಲೋ ಅಡಗಿಬಿಟ್ಟಿತು. ಅವುಗಳ ಸಂತಸದ ಬದುಕು ಮತ್ತದೇ ಸಂತೋಷದಿಂದ ಸಾಗುತ್ತದೆ. ಆ ಹಕ್ಕಿಗಳಾದರೋ ಅಲ್ಲಿನ ಸೀಬೆ , ದಾಳಿಂಬರೆ , ನೆಲ್ಲಿ ಮೊದಲಾದ ಹಣ್ಣು ಕಾಯಿಗಳ ರಸವನ್ನು ಸವಿಯುತ್ತಾ ಸಂತಸದಿಂದ ಧನ್ಯತೆಯನ್ನು ಮೆರೆಯುತ್ತಿವೆ. ಇಂತಹಾ ಷಡ್ರಸಗಳನ್ನು ಸೇವಿಸುತ್ತಲೇ ನಾವೂ ಸಹ ಬದುಕಿನಲ್ಲಿ ಸಾಗುತ್ತಿದ್ದೇವೆ. ಅದರಲ್ಲಿ ಭೌತಿಕ ಷಡ್ರಸಗಳೂ ಇವೆ , ಬದುಕಿನ ಮಾನಸಿಕ ಷಡ್ರಸಗಳೂ ಇವೆ. ಆದರೆ ಧನ್ಯತಾ ಭಾವ, ಸಂತೋಷ ನಮ್ಮಲ್ಲೇಕೋ ಕಾಣುತ್ತಿಲ್ಲ. ಮನಸ್ಸಿನಲ್ಲಿ ಮಾಧುರ್ಯ, ಶಾಂತಿ ,ಸವಿವ ಗುಣವಿಲ್ಲದಿರುವಾಗ ಆರ್ದ್ರತೆಯ ಭಾವವಾಗಲಿ, ಧನ್ಯತೆಯ ಭಾವವಾಗಲಿ ಎಂತು ಬಂದೀತು !? ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021