ದಿನದಿನವು ಯುದ್ಧಕೇಳ್ಮನದ ರಣರಂಗದೊಳು
ತನುತೊತ್ತು ಧನವೆ ಗುರಿ ನನ್ನಿಯೂಳಿಗವೊ !
ಮನಶೈತ್ಯದಾ ಹನನ ಕೇಳುವವರಾರಿಲ್ಲ !
ಹನಿಸು ಬಾ ಪ್ರೀತಿಯನು ಜಾಣಮೂರ್ಖ//
ಸ್ನೇಹಿತರೇ , ನನಗೆ ನಿಜಕ್ಕೂ ಈಗಿನ ಪರಿಸ್ಥಿತಿಯನ್ನು ನೋಡಿ ಭಯವೂ , ಗಾಬರಿಯೂ ಆಗುತ್ತಿದೆ. ನಮ್ಮ ಹಪಹಪಿಕೆ , ಅತೃಪ್ತಿ , ಲೋಭವು ದಿನೇ ದಿನೇ ವಿಕೃತವಾಗುತ್ತಿವೆ. ಸ್ವಾರ್ಥ ಮೇರೆಮೀರುತ್ತಿದೆ. ಧನಸಂಪಾದನೆಯೇ ಗುರಿಯಾಗಿದೆ. ಪ್ರಶಾಂತವಾದ ಮನನಂದನವು ರಣರಂಗವಾಗಿದೆ ! ವಿಕೃತ ಆಲೋಚನೆಗಳ ತಾಣವಾಗಿದೆ. ನಿರಂತರವಾಗಿ ಶರೀರವನ್ನು ಶೋಷಿಸುತ್ತಿದ್ದೇವೆ ! ದೇಹರಥಕ್ಕೆ ಹುಚ್ಚು ಸಾರಥಿಯೊಡನೆ ಮನಬಂದಂತೆ ಸಾಗುವ ದುರ್ಗತಿ ಒದಗಿದೆ. ಮನದ ಸಂತೋಷದ ಕಗ್ಗೊಲೆಯಾಗುತ್ತಿದೆ ! ಸತ್ಯವು ಊಳಿಗದ ಆಳಂತೆ ಕೊರಗುತ್ತಿದೆ ! ಈ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಓ ಗೆಳೆಯ , ಪ್ರೀತಿಯ ಸಿಹಿಸಿಂಚನವನ್ನು ಹನಿಸಿ ಭೂಮಿ ತಾಯಿಗೆ ತಂಪೆರೆಯಬೇಕಿದೆ. ಭೂತಾಯಿ ಮುನಿಯುತ್ತಿದ್ದಾಳೆ. ಮುನಿದೊಮ್ಮೆ ಕೆರಳಿ ಮಾನವ ಸಂತತಿಯನ್ನೇ ನಾಶಗೈಯ್ಯುವ ಮುನ್ನ ಇನ್ನಾದರೂ ಎಚ್ಚೆತ್ತೊಳ್ಳಯ್ಯಾ ! ಬನ್ನಿ ಪ್ರೀತಿಯ ನಂದಾದೀಪವನ್ನು ಬೆಳಗೋಣ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021