ಧನ್ಯ ಸಾಂದೀಪನಿಯು ಧನ್ಯರೈ ಕೌಶಿಕರು
ಧನ್ಯವಾಸಿಷ್ಠಾದಿ ಭಾರ್ಗವಾದಿಗಳು
ಧನ್ಯ ಗುರು! ವರ ಶಿಷ್ಯ! ದಿವ್ಯ ಪಾರಂಪರೆಯು
ಧನ್ಯ ಗುರುಜನ್ಮ ಕಾಣ್ ಜಾಣಮೂರ್ಖ //
ಹರಿಗಂಗೆ ಗುರುವಾಗಿ ಕುಂಭಸಂಭವ ಧನ್ಯ
ಹರಿಗೆ ಗುರುವಾಗಿ ಸಾಂದೀಪನಿಯೆ ಧನ್ಯ!
ಗುರುವಿಗೇ ಗುರುವಾಗಿ ಜಗವ ಪೊರೆದಂತ ಗುರು
ಗುರುಪರಂಪರೆ ಧನ್ಯ ಜಾಣಮೂರ್ಖ //
ನಿಜಕ್ಕೂ ಒಬ್ಬ ಗುರುವಿನ ಜನ್ಮವೇ ಧನ್ಯ. ಜಗತ್ತಿಗೆ ಎಂತೆಂತಹಾ ದಿವ್ಯ ಚೇತನಗಳನ್ನು ಕೊಡುಗೆಯಾಗಿ ನೀಡುವ ಭಾಗ್ಯ ಗುರುವಿನದಾಗುತ್ತದೆ ! ಶ್ರೀಕೃಷ್ಣನ ಗುರುವಾದ ಸಾಂದೀಪನಿ , ಶ್ರೀರಾಮನಿಗೆ ಗುರುಸ್ಥಾನದಲ್ಲಿ ನಿಂತ ವಿಶ್ವಾಮಿತ್ರ , ವಸಿಷ್ಠಾದಿಗಳು ! ಶ್ರೇಷ್ಠ ಬಿಲ್ಲುಗಾರರಾದ ಕರ್ಣಂಗೆ ಭಾರ್ಗವರಾಮ , ಅರ್ಜುನ ಏಕಲವ್ಯಾದಿಗಳಿಗೆ ಗುರುದ್ರೋಣಾಚಾರ್ಯ ! ಅಬ್ಬಾ , ಎಂತಹಾ ಗುರು ಪರಂಪರೆ ! ಎಂತಹಾ ಶಿಷ್ಯವೃಂದ ! ಜಗತ್ತಿಗೇ ಗೀತಾದರ್ಶನ ಮಾಡಿಸಿದ ಶ್ರೀ ಕೃಷ್ಣ ಜಗದ ಗುರುವಾದ ! ಗುರುವಿಗೇ ಗುರುವಾದ ! ಗುರುವನ್ನೇ ಮೀರಿದ ಶಿಷ್ಯನಾದ ! ಇಂತಹ ಶಿಷ್ಯರನ್ನು ಪಡೆದ ಗುರುಗಳೆಂತ ಧನ್ಯರು ! ಆ ಗುರುವಿನ ಆತ್ಮ ಅದೆಷ್ಟು ಧನ್ಯ ! ಪಂಪ ರನ್ನ ಕುಮಾರವ್ಯಾಸಾದಿ ಕವಿವರರ ಗುರುಗಳೆಂತ ಧನ್ಯರು !? ಸಿ.ವಿ ರಾಮನ್ , ಐನ್ ಸ್ಟೈನರು , ಅಬ್ದುಲ್ ಕಲಾಮರಂತಹಾ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದ ಗುರುಗಳೆಷ್ಟು ಧನ್ಯರು ! ಬನ್ನಿ ಇಂತಹಾ ಗುರು ಶಿಷ್ಯ ಪರಂಪರೆಗೆ ಶಿರಬಾಗಿ ನಮಿಸೋಣ ! ಸ್ಮರಣೆ ಮಾತ್ರದಿಂದಲಾದರೂ ನಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021