ಬಂದು ದೇವಾಲಯಕೆ ಕಂಡೆ ದೇವನನೆನುವ
ರೆಂದು ಕಂಡರೊ ಕಾಣೆ ಎಂತು ಕಾಣುವರೊ !?
ಸುಂದರಾಂಗನ ಕಂಡು ಮರಳಿ ಮಾಯೆಗೆ ಬೀಳ್ವ
ಮಂದಿ ಮಂದೆಯೊ ಮುಂದೆ ಜಾಣಮೂರ್ಖ //
ದೇವಾಲಯಕ್ಕೆ ಬಂದು ದೇವರ ದರ್ಶನವಾಯ್ತು ಎಂದು ಸಂತೋಷಪಡುವ ಜನರನ್ನೊಮ್ಮೆ ನೋಡಿ ! ಭಗವಂತನನ್ನು ನಿಜವಾಗಿ ಕಂಡವರು ಮತ್ತೆ ಪ್ರಾಪಂಚಿಕದತ್ತ ಸುಳಿದಾರೆಯೇ !? ಎಂದು ಕಂಡರೋ ! ಎಂತು ಕಂಡರೋ ! ಅಂತೂ ದರ್ಶನ. ಮಾಡಿ ಜನ್ಮ ಪಾವನಗೊಂಡಷ್ಟು ಸಂತಸ ಪಡುತ್ತಾರೆ. ಯಥಾಪ್ರಕಾರ ಮತ್ತೆ ಅದೇ ಮಾಯೆಯ ಬಲೆಗೆ ಬೀಳುತ್ತಾರೆ ! ಆದರೆ ಸತ್ಯವೆಂದರೆ ನಿಜವಾಗಿ ಭಗವಂತನ ದರ್ಶನವಾದರೆ ಮತ್ತೆ ಮಾಯೆ ಹತ್ತಿರ ಸುಳಿದೀತೆ !? ಅಹಂಕಾರ ಮಮಕಾರ , ರಾಗದ್ವೇಷಾದಿಗಳು ಹತ್ತಿರ ಬಂದಾವೆ !? ಅಷ್ಟಮದಗಳು , ಅರಿಷಡ್ವರ್ಗಗಳು ಕಾಡುತ್ತವೆಯೇ !? ಇಂತಹಾ ಪಾಶಗಳಿಂದ ಬಂಧಿಸಲ್ಪಟ್ಟ ಮಂದಿಯ ಮಂದೆಗೆ ಏನೆನ್ನಬೇಕು !? ಇದು ನನ್ನ ದೇವರು ! ಅದು ನಿನ್ನ ದೇವರೆನ್ನುವ ಭಾವವಳಿಯದಿರೆ ! ಹೃದಯವರಳದ ಮೇಲೆ ದೇವನು ಕಾಣುವುದಾದರೂ ಎಂತು !? ಮೂರ್ತಿಯನ್ನು ಕಾಣಬಹುದು ! ಆದರೆ ಭಗವತನ ದಿವ್ಯ ತತ್ತ್ವವರಿಯದ ಮೇಲೆ ಭೌತಿಕ ಮೂರ್ತಿಯ ದರ್ಶನವಲ್ಲದೇ ಮತ್ತಾವ ದರ್ಶನವಾದೀತು !? ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021