ಅವ್ಯಕ್ತನಾದವನ ವ್ಯಕ್ತನಾಗಿಸಿ ಮತ್ತೆ
ಸುವ್ಯಕ್ತ ತತ್ತ್ವದೊಳು ಬಂಧಿಸುತಲವನ
ಅವ್ಯಕ್ತನನು ರಾಗರಸಗಳಿಂ ಚಿತ್ರಿಸುತ
ಸುವ್ಯಕ್ತಿಪುದೆ ಚೋದ್ಯ ಜಾಣಮೂರ್ಖ //
ನಿರಾಕಾರ ಸ್ವರೂಪನಿಗೆ ಶೂನ್ಯನೆಂದೆವು ! ಲಿಂಗರೂಪ ಎಂದೆವು ! ಮತ್ತೆ ಆ ಲಿಂಗರೂಪಿಗೆ ಕಣ್ಣು ಕಿವಿಗಳನ್ನಿಟ್ಟು ಅಂಗರೂಪಿಯನ್ನಾಗಿಸಿದೆವು. ಇದು ನಮ್ಮ ಭಕ್ತ್ಯಾಭಿವ್ಯಕ್ತಿಯ ಒಂದು ರೂಪವೇ ಹೌದು. ಹೋಗಲಿ ಎಂದರೆ ಆ ಶಿವನಿಗೆ ಶೃಂಗಾರಾದಿ ರಸಭಾವಗಳನ್ನು ಮುಖದಲ್ಲಿ ತಂದು ಶಾಂತಶಿವ , ರೌದ್ರಶಿವ , ತಾಂಡವನೃತ್ಯಹರ ಹೀಗೆಲ್ಲಾ ಭಾವಕ್ಕನುಗುಣವಾಗಿ ಸ್ತುತಿಸಿ ಸಂತೋಷ ಪಟ್ಟೆವು. ಸ್ಮಶಾಣ ವಾಸಿಯಾಗಿಸಿದೆವು , ಮನವ ಹೂವಾಗಿಸದೆ ಬಾಡುವ ಭೌತಿಕ ಹೂ ಪತ್ರೆಗಳಿಂದ ಮುಚ್ಚಿಬಿಟ್ಟೆವು ! ಇದೇ ನೋಡಿ ಅಚ್ಚರಿ ! ಅವ್ಯಕ್ತನನ್ನು ವ್ಯಕ್ತಿಸಿದುದು ಮಾತ್ರ ನಮ್ಮ ಅದ್ಭುತ ಸೃಜನಶೀಲತೆಗೋ , ಭಕ್ತಿಗೋ (ಡಾಂಭಿಕವಾಗದಿದ್ದರಾಯ್ತು) ಹಿಡಿದ ಕನ್ನಡಿ. ಆದರೆ ಶಿವ ಎಷ್ಟಾದರೂ ಶಿವನೇ ! ಭಕ್ತರು ಯಾವ ರೂಪಿಂದೆ ನೋಡ ಬಯಸಿದರೆ ಹಾಗೆಯೇ ಪ್ರಕಟ !! ಪ್ರೇಮಮಯನೂ , ಪ್ರೇಮ ಸ್ವರೂಪನೂ ಆದ ಶಿವನನ್ನು ಭಕ್ತಿಯಿಂದ ಸ್ತುತಿಸುವ ಮಹಾ ಶಿವರಾತ್ರಿ ಇಂದು. ದಯಾಮಯನಾದ ಶಿವನು ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲೆಂಬ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳೊಂದಿಗೆ
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021