ಸಗ್ಗದಾ ಕನಸೇಕೆ ? ಸಗ್ಗವಾಗಿಸೊ ಬದುಕ !
ಒಗ್ಗಿಕೊಳ್ಳದೆ ಜಗಕೆ ಸಗ್ಗಕ್ಕೆ ಮೊರೆಯೆ !?
ಜಗ್ಗದಲೆ ಬಗ್ಗದಲೆ ಸಿಗ್ಗಾದ ಬದುಕೇಕೊ
ಒಗ್ಗಿನಡೆ ಸಗ್ಗ ಬಾಳ್ ಜಾಣಮೂರ್ಖ//
ನಮಗೆಲ್ಲಾ ಮೋಕ್ಷದ ಹಂಬಲ ಇದೆ. ಆದರೆ ಮೋಕ್ಷ ಹೇಗಿರುತ್ತೆ ಅಂತ ಮಾತ್ರ ಯಾರಿಗೂ ಗೊತ್ತಿಲ್ಲ ! ಎಂತಹಾ ವಿಚಿತ್ರ ಅಲ್ಲವೇ ?! ಈ ಬದುಕಿನ ನಂತರ ನಮಗೆ ಸ್ವರ್ಗ ಬೇಕೆಂಬಾಸೆ ! ನರಕ ಬೇಡೆಂಬಾಸೆ ! ಬರೀ ಕಲ್ಪನಾ ಜಗತ್ತಿನಲ್ಲಿ ವಿಹರಿಸುವವರೇ ನಾವಾಗಿಬಿಟ್ಟಿದ್ದೇವೆ ! ಈಗ ಸ್ವರ್ಗದ ಕನಸು ಕಾಣುವುದ ಬಿಟ್ಟು ನಾವಿರುವ ಜಗತ್ತನ್ನೇ ಸಗ್ಗವಾಗಿಸೋಣ. ನಮ್ಮ ಬದುಕನ್ನೇ ಸಗ್ಗವಾಗಿಸೋಣ. ಅದೇನು ಬಹಳ ಸುಲಭ. ಈ ಜಗತ್ತು ಹೇಗಿದೆಯೋ ಹಾಗೆ ಪ್ರೀತಿಯಿಂದ ಹೊಂದಿಕೊಂಡು ನಡೆದರಾಯ್ತು ಅಷ್ಟೆ. ಅಲ್ಲೇ ಬರೋದು ನೋಡಿ. ನಾನೇಕೆ ಹೊಂದಿಕೋಬೇಕು ಇವರಿಗೆಲ್ಲಾ ? ಬೇಕಿದ್ದರೆ ಇವರುಗಳೇ ನಮಗೆ ಹೊಂದಿಕೊಳ್ಳಲಿ ಎಂಬ ಅಹಂಕಾರವೇ ಬದುಕ ಸಗ್ಗವಾಗಿಸುವ ಮೊದಲ ಅಡ್ಡಿ ! ಯಾರಿಗೂ ಜಗ್ಗದೇ , ಬಗ್ಗದೇ ಸಿಗ್ಗಾದ ಅಂದರೆ ಜಿಗುಪ್ಸೆಯಿಂದ ಕೂಡಿದ ಬದುಕಾದರೂ ಯಾಕಯ್ಯ ಗೆಳೆಯಾ !? ಒಗ್ಗಿಕೊಂಡು ನಡೆದುಬಿಡು. ಸ್ವಲ್ಪ -“ಬೇಕು ಬೇಕೆಂಬ ಮಂತ್ರ ತೊರೆದು ಸಾಕು ಸಾಕೆಂಬ ಜಾಡ ಹಿಡಿದು ನಡೆ ಗೆಳೆಯ !” ಆಗ ಎಲ್ಲರೂ ನಿನ್ನವರೇ ! ಸ್ವರ್ಗಸದೃಶವಾಗುತ್ತದೆ ! ಹೇಗಿದೆ ಸರಳತಂತ್ರ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021