ಹೊತ್ತು ಮೆರೆವುದೆ ಮತ್ಸ್ಯ ಮತ್ತು ರತ್ನಂಗಳನು
ಎತ್ತಿಕ್ಕುವವೆ ಖಗ ಮೃಗಾದಿಗಳು ಕೂಳ !
ಮಿತ್ತುವಿದೆ ಕೂಗಿಡುವ ಚಿತ್ತವೃತ್ತಿಯದೇಕೆ
ಹೊತ್ತುಹೋಹುದು ಬದುಕೊ ಜಾಣಮೂರ್ಖ //
ಸಮುದ್ರದ ತಳ ಮತ್ತು ರತ್ನಗಳ ಆಗರವಾದರೂ ಅಲ್ಲಿನ ಮೀನಾಗಲಿ ಅಥವಾ ಇತರೆ ಜಲಚರಗಳಾಗಲಿ ಅವುಗಳ ಬಗ್ಗೆ ಲಕ್ಷ್ಯ ನೀಡುವವೇನು !? ಅವನ್ನು ಹೊತ್ತು ತಿರುಗುವವೇನು !? ನಾವು ನೀಡುವಷ್ಟು ಪ್ರಾಶಸ್ತ್ಯವನ್ನು ಅವು ನೀಡವು ! ಅದುಬಿಡಿ . ಖಗಮೃಗಾದಿಗಳನ್ನು ನೋಡಿ ! ಅವು ನಾಳೆಗೆ ಅಂತ ಏನನ್ನೂ ಕೂಡಿಡೋದಿಲ್ಲ ! ಈ ಪ್ರಕೃತಿಯಲ್ಲಿ ತುಂಬಾ ಸಂತೋಷವಾಗಿ ಬದುಕಿಬಿಡುತ್ತವೆ. ಜೀವನದ ಅದಾವ ಸತ್ಯ ಅವುಗಳಿಗೆ ತೀಳಿದಿದೆಯೋ ಬಲ್ಲವರಾರು !? ಎಷ್ಟು ನಿರ್ಲಿಪ್ತವಾಗಿ ಬದುಕುತ್ತವೆ ಅವು !? ಮೃತ್ಯು ನಿಶ್ಚಿತವೆಂದು ತಿಳಿದಿದ್ದರೂ ನಾವು ಅಬ್ಬರಿಸಿ ಬೊಬ್ಬಿರಿಯುತ್ತೇವೆ. ಬದುಕಿನಲ್ಲಿ ಇಲ್ಲದ ನಿರೀಕ್ಷೆಗಳನ್ನಿಟ್ಟುಕೊಂಡು ದುಃಖಪಡುತ್ತೇವೆ. ಓ ಗೆಳೆಯ ಇನ್ನಾದರೂ ಶಾಂತಿಯಿಂದ ಬದುಕೋಣ. ಚಿರಸುಖವನರಸುತ್ತ , ಬದುಕಿನ ಸೂಕ್ಷ್ಮತೆಗಳನ್ನೂ , ಅಚ್ಚರಿಗಳನ್ನೂ ಕಂಡು ಬೆರಗುಗೊಳ್ಳುತ್ತಾ , ಭಗವಂತನ ಸೃಷ್ಟಿಯ ದಿವ್ಯತ್ವವನ್ನು ಕಂಡು ಸಂತಸಪಡುತ್ತಾ ಬದುಕನ್ನು ಕಳೆಯಬೇಕಿದೆ. ಹೊತ್ತೇನೂ ಯಾರಿಗಾಗಿಯೂ ನಿಲ್ಲುವುದಿಲ್ಲ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021