ಮಕ್ಕಳಂದದಿ ದೇವನಿಳೆಗೆ ಬರುವನು ದಿಟದಿ
ಚಿಕ್ಕ ಚಿಣ್ಣರೆ ದೇವಗತಿ ಸನಿಹಮಿಹರು !
ಮಿಕ್ಕ ದೇವರ ಬಿಟ್ಟು ಮಕ್ಕಳೊಡನಾಡು ಬಾ
ಸಿಕ್ಕಿಬಿಡುವನೊ ದೇವ ಜಾಣಮೂರ್ಖ //
ಮಕ್ಕಳೇ ದೇವರು ಅನ್ನೋ ಮಾತನ್ನು ಕೇಳಿದ್ದೇವೆ. ಅಲ್ಲವೇ ! ಭಗವಂತನಿಗೆ ತುಂಬಾ ಹತ್ತಿರ ಇರೋರು ಮತ್ತೆ ಭಗವಂತ ತುಂಬಾ ಪ್ರೀತಿಸೋರು ಮಕ್ಕಳು. ನಮ್ಮ ಮಕ್ಕಳ ಜೊತೆ ಪ್ರೀತಿಯಿಂದ ಕಳೆಯೋ ಕ್ಷಣಗಳು ಇವೆಯಲ್ಲಾ ಅವು ನಿಜಕ್ಕೂ ನಮ್ಮ ಜೀವನದ ಅಮೃತ ಗಳಿಗೆಗಳು. ಅವರು ರಾಗದ್ವೇಷಾದಿ ಮನೋವಿಕಾರಗಳಿಂದ ದೂರವಿದ್ದು ದೇವರೇ ಆಗಿಬಿಟ್ಟಿರುತ್ತಾರೆ. ಅವರ ರೂಪದಲ್ಲಿ ದೇವನೇ ಇಳೆಗಿಳಿದು ಬಂದಿರುವನೆಂದರೆ ಏನೂ ಅತಿಶಯೋಕ್ತಿ ಎನಿಸದು. ಪ್ರಾಪಂಚಿಕದಲ್ಲಿ ಬಿದ್ದು ಮನಸ್ಸನ್ನು ರಾಡಿ ಮಾಡಿಕೊಳ್ಳುವುದಕ್ಕಿಂತ ಮಕ್ಕಳೊಡನೆ ಪ್ರೀತಿಯಿಂದ ಮಾತನಾಡಿದರಾಯ್ತು ! ಅಮೃತಸದೃಶವಾದ ಅವರ ಮನದ ಭಾವ ನಮ್ಮನ್ನೂ ಆ ಎತ್ತರಕ್ಕೇ ಕೊಂಡೊಯ್ಯುತ್ತವೆ. ಆ ಭಾವದ ಸಿಹಿ ಸಿಂಚನ , ಅವರ ಮಾತು , ನಡೆ , ನುಡಿ , ಮುಗ್ಧನೋಟ ಒಂದೇ ….ಎರಡೇ…. ಒಟ್ಟಿನಲ್ಲಿ ಅದು ಬಣ್ಣಿಸಲು ಅಸದಳ ! ಯಾವುದು ವ್ಯಕ್ತಪಡಿಸಲಾಗದಷ್ಟು ಸುಂದರವೋ , ಅಗಮ್ಯವೋ ಅದು ಭಗವಂತನ ಸ್ವರೂಪವಾಗಿರುತ್ತದೆ. ಮಿಕ್ಕ ದೇವರನೆಲ್ಲ ಬಿಟ್ಟು ಬಾರಯ್ಯ ಗೆಳೆಯ ! ಮಕ್ಕಳೊಡನೆ ಪ್ರೀತಿಯಿಂದ ಜೀವಿಸು. ಇಲ್ಲಿಯೇ ಇದ್ದಾನೆ ಭಗವಂತ ! ಬೇಗ ಸಿಕ್ಕಬಿಡುತ್ತಾನೆ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021