ಹೊಟ್ಟೆ ತುಂಬಿದರಾಯ್ತೆ ಕೆಟ್ಟ ಹಸಿವಿಂದ್ರಿಯಕೆ
ಬಟ್ಟೆಗಾಣದ ಬದುಕು ಸಿಟ್ಟೇಕೆ ಮಾಳ್ಪೆ ?
ಹೊಟ್ಟೆ ಕೊಟ್ಟಿಹ ದೇವ ರಟ್ಟೆಗಿಟ್ಟಿಹ ಬಲವ
ಕೊಟ್ಟ ಚಿಂತನೆಗರಿವ ಜಾಣಮೂರ್ಖ //
ನೋಡಿ ಇದೆಂತಹಾ ವಿಚಿತ್ರ ! ಸ್ವಲ್ಪ ಹಾಗೇ ಗಮನಿಸಿ ! ಹಸಿವು ಯಾರಿಗಿಲ್ಲ ! ಅದಕ್ಕೇ ದುಡಿದು ತಿನ್ನಲೆಂದು ದೇವರು ಹೊಟ್ಟೆಗೆ ಹಸಿವೆಂತೋ ಅಂತೆ ರಟ್ಟೆಗೆ ಬಲವನ್ನೂ ಕೊಟ್ಟಿದ್ದಾನೆ. ಆದರೂ ಕೆಲವೊಮ್ಮೆ ಹಸಿವಿನ ತಮಣೆಯ ದಾರಿ ಕಾಣದೆ ಮನಸ್ಸು ಕೋಪದಲ್ಲೋ , ಕಣ್ಣೀರಿನಲ್ಲೋ ಪರ್ಯವಸಾನವಾಗುತ್ತದೆ. ಹಸಿವು ಕೇವಲ ಹೊಟ್ಟೆಗೆ ಮಾತ್ರವಲ್ಲ. ಇಂದ್ರಿಯಗಳ ಹಸಿವು ಇದಕ್ಕಿಂತ ತುಂಬಾ ತೀಕ್ಷ್ಣ ಮತ್ತು ತೀವ್ರತರವಾದದ್ದು. ಆದರೆ ನಾವು ಹೊಟ್ಟೆಯ ಹಸಿವನ್ನು ಗಣನೆಗೆ ತೆಗೆದುಕೊಂಡಷ್ಟು ಇಂದ್ರಿಯಗಳ ಹಸಿವಿನ ಕಡೆಗೆ ಗಮನ ನೀಡುವುದೇ ಇಲ್ಲ ! ಎಲ್ಲರೂ ಮಾಡುವುದು ಹೊಟ್ಟೆಗಾಗಿ ! ಗೇಣು ಬಟ್ಟೆಗಾಗಿ ! ತುತ್ತು ಹಿಟ್ಟಿಗಾಗಿ ! ಆದರೆ ಇಂದ್ರಿಯಗಳ ಹಸಿವಿನ ಕತೆ !? ತುಂಬಾ ಸಾತ್ವಿಕವಾದ ರೀತಿಯಲ್ಲಿ ಈ ಹಸಿವನ್ನು ಕಳೆಯಬೇಕಿದೆ. ಹಸಿದ ಇಂದ್ರಿಯಗಳಿಗೆ ಕೆಟ್ಟದಾದ ಆಹಾರ ಸಿಕ್ಕಿತೆಂದರೆ ಮುಗಿಯಿತು. ಬದುಕು ಮೂರಾಬಟ್ಟೆಯಾಗಿಬಿಡುತ್ತದೆ. ಅದಕ್ಕಾಗಿಯೇ ಭಗವಂತನು ಚಿಂತಿಸಿ ಅಡಿಯಿಡಲೆಂದು ಚಿಂತಿಸುವ ಶಕ್ತಿಯನ್ನೂ , ಶ್ರೇಷ್ಠ ಜ್ಞಾನವನ್ನೂ ನಮಗೆ ದಯಪಾಲಿಸಿದ್ದಾನೆ. ನಾವು ಚಿಂತಿಸಬೇಕಷ್ಟೆ ! ಚಿಂತಿಸದೇ ಅಕಾರ್ಯಗಳನ್ನು ಗೈದರೆ ಆ ದೈವ ತಾನೆ ಏನು ಮಾಡುತ್ತಾನೆ !? ಅಲ್ಲವೇ ಗೆಳೆಯರೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021