ಹೆಸರಿಗಾಗೆಳೆಸುವೇಕಮರರಾರಿಲ್ಲಿ ಪೇಳ್ !?
ಹೆಸರಿಗಾಗತ್ತವರು ಚಿರರಾದರೇನು !?
ಹೆಸರ ಕೆತ್ತಿಹನೇನು ಸೃಷ್ಟಿಸಿದ ದೇವ ತಾ
ಬಿಸಿಲಗುದುರೆಯಿದೇಳೊ ಜಾಣಮೂರ್ಖ //
ಹೊಟ್ಟೆ ಬಟ್ಟೆಗಾಗಿ ಅಖಂಡ ಜೀವರಾಶಿಯೇ ಪರಿತಪಿಸುತ್ತಿದೆ. ಅದಕ್ಕೇ ದಾಸವರೇಣ್ಯರಾದ ಕನಕದಾಸರು -ಎಲ್ಲರು ಮಾಡುವುದೂ ಹೊಟ್ಟೆಗಾಗೀ ಗೇಣು ಬಟ್ಟೆಗಾಗಿ ” ಎಂದು ವಿಡಂಬನೆಯಿಂದ ಹಾಡಿದ್ದಾರೆ. ಮತ್ತೆ ಕೆಲವರ ಹೋರಾಟ ಹೆಸರಿಗಾಗಿ ! ಹೆಸರಿಗಾಗಿ ಏನೆಲ್ಲಾ ಮಾಡುತ್ತಾರೆ !! ಮಾಡುವುದಕ್ಕೆ ಮಾಡೋದಿಲ್ಲ. ಕೆಲಸಕ್ಕೆ ಬಾರದುದಕ್ಕೆಲ್ಲಾ ಹೋರಾಟಗೈಯ್ಯುತ್ತಿರೋದು ಒಂದು ದೊಡ್ಡ ವಿಪರ್ಯಾಸವೇ ಸರಿ. ಹೋಗಲಿ ಹೆಸರಿಗಾಗಿ ದುಡಿದವರು ಯಾರು ಶಾಶ್ವತರಾಗಿ ಉಳಿದಿದ್ದಾರೆ ಇಲ್ಲಿ !? ನಮ್ಮದೇನು ಬಿಡಿ ! ಅಖಂಡ ಸೃಷ್ಟಿಯನ್ನ ಸೃಷ್ಟಿಸಿದ ಭಗವಂತನು ಎಲ್ಲಿ ಕೆತ್ತಿದ್ದಾನೆ ತನ್ನ ಹೆಸರನ್ನು !? ನಮ್ಮನ್ನು ಸೃಷ್ಟಿಸಿ , ಬದುಕ ನೀಡಿರುವ ಆ ದಿವ್ಯ ಭವ್ಯ ಶಕ್ತಿಗೆ ಋಣಿಯಾಗಿ ಕೃತಜ್ಞತೆಯಿಂದ ಬದುಕಿದಾಗ ಬದುಕು ಸಾರ್ಥಕ ಮತ್ತೆ ಅರ್ಥಪೂರ್ಣ. ಗ್ರಹ ತಾರೆ ನಕ್ಷತ್ರಗಳಾದಿಯಾಗಿ ಭವ್ಯ ಸೃಷ್ಟಿಯೇ ಒಂದು ದಿನ ಅಳಿದು ಹೋಗುವಾಗ ಇನ್ನು ನಮ್ಮ ಹೆಸರು ಉಳಿವುದೇನು !? ಇಂತಹುದೊಂದು ಅರಿವು ನಮ್ಮದಾಗಬೇಕಷ್ಟೆ. ಇನ್ನೆಲ್ಲಾ ಬಿಸಿಲುಗುದುರೆಯನರಸಿ ಹೋದಂತೆ ಅಷ್ಟೆ. ದೇವನೊಬ್ಬನೇ ಸತ್ಯ , ನಿತ್ಯ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021