ಸಿದ್ಧಾಂತ ಗೆದ್ದೊಡೇಂ ಬದುಕೆಡವಿ ಬಿದ್ದಿರಲು!
ಬದ್ಧತೆಯದೊದ್ದಾಡಿ ತಿಣುಕುತಿರಲು !
ಉದ್ಧಾಮ ಪಾಂಡಿತ್ಯ ನಿದ್ದೆಗೈಯ್ಯುತಲಿರಲು
ಸಿದ್ಧಿಯೆಂತೊದಗುವುದೊ ಜಾಣಮೂರ್ಖ//
ಇದು ಇಂದಿನ ಸ್ಥಿತಿಯ ಅನಾವರಣ ಎಂದರೆ ತಪ್ಪಾಗಲಾರದು. ಸೈದ್ಧಾಂತಿಕವಾಗಿ ಎಲ್ಲವನ್ನೂ ಓದುತ್ತಾರೆ ! ಅಂಕವೂ ಬರುತ್ತದೆ ! ಕೆಲಸವೂ ಸಿಗುತ್ತದೆ ! ಆದರೆ ಕಲಿತುದರ ಅರ್ಥಾತ್ ಪುಸ್ತಕಜ್ಞಾನದ ಅನುಷ್ಠಾನವಾಗಬೇಕಲ್ಲಾ ! ಏನೇ ಸೈದ್ಧಾಂತಿಕ ಜ್ಞಾನವಿದ್ದರೂ ಅದು ಬದುಕು ಕಲಿಸೋ ಪ್ರಾಯೋಗಿಕ ಪಾಠಕ್ಕಿಂತ ಮಿಗಿಲಾಗಲಾರದು. ಅನುಭವದ ಜ್ಞಾನವೇ ಶ್ರೇಷ್ಠ. ಹಾಗೆಂದು ಸಿದ್ಧಾಂತವನ್ನು ಜರಿಯುತ್ತಿಲ್ಲ ! ಕಲಿತದ್ದನ್ನು ಬದುಕಿನ ಅನುಭವದೊಂದಿಗೆ ಸಮನ್ವಯಿಸಿ, ತಾಳೆ ನೋಡುವ ಪ್ರವೃತ್ತಿ ಬಂದಾಗ ಅದು ಸಾರ್ಥಕವಾಗುತ್ತದೆ. ಆ ಕಾರ್ಯವಾಗದೆ ಇದ್ದರೆ ಬದುಕಿನಲ್ಲಿ ಬದ್ಧತೆ ಹೇಗೆ ಬರುತ್ತದೆ !? ಉದ್ಧಾಮ ಪಾಂಡಿತ್ಯದ ಸೋಗು ಹಾಕುವಿಕೆ ಎದ್ದು ಕಾಣುತ್ತದೆಯೇ ಹೊರತು ಪಾಂಡಿತ್ಯವು ಮಾತ್ರ ನಿದ್ರೆಗಯ್ಯುತ್ತಿರುತ್ತದೆ. ಹೀಗಾದರೆ ಯಶಸ್ಸು ಬರುವುದಾದರೂ ಹೇಗೆ !? ಅಂದುಕೊಂಡ ಗುರಿ ಮುಟ್ಟುವುದಾದರೂ ಹೇಗೆ !? ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021