ಕಿರಿದಹುದು ಮರಳಕಣ ಕಟ್ಟಡವು ಕಿರಿದೇನು?!
ಕಿರಿದಾದುದೀವ ಸಿರಿಭಾವ ಬಲು ಹಿರಿದು !
ಕಿರಿದರಾ ಹಿರಿತತ್ತ್ವವರಿತಾಗ ಬಾಳ್ಗೆ ಜಸ
ಹಿರಿದೇನು ಕಿರಿದೇನು ಜಾಣಮೂರ್ಖ //
ಸಣ್ಣ ಕಣ ಅಂತ ಮರಳ ಕಣವನ್ನಾಗಲಿ ನಿಕೃಷ್ಟವಾಗಿ ಕಾಣಬಾರದು ಕಣಯ್ಯ ಗೆಳೆಯ ! ಅಂತಹಾ ಸಹಸ್ರ ಸಹಸ್ರ ಕೋಟಿ ಮರಳಕಣಗಳು ಸೇರಿಯೇ ನಮಗೆ ಮನೆಯಾಗಿ ಆಶ್ರಯ ಕೊಟ್ಟಿರೋದು ಅಲ್ಲವೇ !? ನಾವು ಯಾವುದನ್ನು ಕಿರಿದೆಂದು ಗಣಿಸುವುದಿಲ್ಲವೋ ಅದರಲ್ಲಿನ ಹಿರಿತತ್ತ್ವವು ಕೊಡುವ ಆನಂದವು ಮಾತ್ರ ತುಂಬಾ ದೊಡ್ಡದು ! ಅದನ್ನು ಗಮನಿಸಿ ಅರಿತು ಅನುಭವಿಸಬೇಕಷ್ಟೆ. ಆ ಕಿರಿದರಲ್ಲಿನ ಹಿರಿಯ ತತ್ತ್ವದಿಂದ ಬದುಕಿಗೊಂದು ಯಶಸ್ಸಿನ ದಾರಿ, ಒಂದು ಸಂದೇಶ ಖಂಡಿತ ಸಿಗುತ್ತದೆ. ಒಂದು ಬೆಂಕಿಕಡ್ಡಿ ತುಂಬಾ ಚಿಕ್ಕದು ಕನಿಷ್ಠ ಎನ್ನಬೇಡಿ. ಅದಿಲ್ಲದಿದ್ದರೆ ಮನೆಯ ದೇವರ ನಂದಾದೀಪ ಬೆಳಗದು ! ಗಂಧದಕಡ್ಡಿ ಚಿಕ್ಕದಿರಬಹುದು. ಆದರೆ ಅದು ತಾನು ತನ್ನನ್ನು ಸುಟ್ಟುಕೊಂಡು ಮನೆಯನ್ನೆಲ್ಲಾ ಸುಗಂಧದಿಂದ ತುಂಬಿಬಿಡುತ್ತದೆ! ಮತ್ತೆ ಅದು ಚಿಕ್ಕದೆಂತಾದೀತು !? ಕವಿತೆ ಚಿಕ್ಕದಿರಬಹುದು ಆದರೆ ಅದು ನೀಡುವ ಸಂದೇಶ ಚಿಕ್ಕದೇನು !? ಹಾಗೆ ನೋಡಿದರೆ ಇಲ್ಲಿ ಯಾವುದೂ ಕಿರಿದೂ ಅಲ್ಲ , ಯಾವುದೂ ಹಿರಿದೂ ಅಲ್ಲ. ಜಗತ್ಕಾರಣ ಕರ್ತ ಭಗವಂತನೊಬ್ಬನೇ ಮಹೋನ್ನತ ಸತ್ಯ ! ನಿತ್ಯ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021