ದಿನದಿನವು ಉಂಡುಡಲು ಕೊಟ್ಟಿಲ್ಲವೇ ದೈವ
ಮನದಿ ಚಿಂತೆಯದೇಕೆ ಮತ್ತೇಕೆ ಮುನಿಸು !?
ಮನವ ಸುಡುತಿದೆ ಬಿಡದೆ ಚಿಂತೆಚಿತೆ ದಹಿಸಿಬಿಡು
ಕನವರಿಸದಿರು ಮತ್ತೆ ಜಾಣಮೂರ್ಖ //
ನಾವು ಬದುಕೋದಕ್ಕೆ ಎಷ್ಟು ಬೇಕೋ ಅಷ್ಟನ್ನು ಭಗವಂತ ಸಮೃದ್ಧವಾಗಿ ನೀಡಿದ್ದಾನೆ. ಉಣ್ಣಲು , ಉಡಲು ಯಾವ ಕೊರತೆಯೂ ಇಲ್ಲದಷ್ಟರ ಮಟ್ಟಿಗೆ ಕೊಟ್ಟು ಸವಿದು ಬದುಕಲು ಕಳುಹಿಸಿದ್ದಾನೆ. ಅದರೂ ಕಷ್ಟಪಡದೇ ಎಲ್ಲವೂ ಸಿಕ್ಕಿಬಿಡಬೇಕೆನ್ನುವ ಲೋಭದಲ್ಲಿ ನಾವು ಚಿಂತಿತರಾಗುತ್ತಿದ್ದೇವೆ. ಶಾಂತರಾಗಿ ಯೋಚಿಸಿ , ನಿಮಗೇ ತಿಳಿಯುತ್ತೆ. ನಮ್ಮಾಂತರ್ಯದಲ್ಲಿ ಚಿಂತೆಯೇ ಚಿತೆಯಾಗಿ ಸುಡುತ್ತಿದೆ ! ದಿನೇ ದಿನೇ ದಹಿಸುತ್ತಿದೆ ! ಅದರಿಂದ ನಾವೂ ಜರ್ಜರಿತರಾಗುತ್ತಿದ್ದೇವೆ. ಆದರೂ ಆ ಲೋಭದ ಕನವರಿಕೆ ಮಾತ್ರ ನಮ್ಮಿಂದ ದೂರವಾಗುತ್ತಲೇ ಇಲ್ಲ. ಈಗಂತೂ ಮಿತಿಮೀರಿ ಮತಿಗೆಟ್ಟಿದೆ ! ಗತಿಗೆಟ್ಟು ಹೋಗುವ ಮುನ್ನ ಎಚ್ಚರಾಗಬೇಕಿದೆ ! ನಮ್ಮ ಪ್ರೀತಿಯ ಹೆಮ್ಮೆಯ ಮುಕ್ತಕ ಭೀಷ್ಮ ಡಿ.ವಿ.ಗುಂಡಪ್ಪ ರವರು ಅದಕ್ಕೇ ನಮ್ಮನ್ನು ಕರೆದಿರೋದು “ಸಿಂಬಳದ ನೊಣನೀನು ಮಂಕುತಿಮ್ಮಾ !” ಎಂದು. ಆ ಸಾಲುಗಳನ್ನು ಓದಿ ಕ್ಷಣಕಾಲ ದಿವ್ಯ ವೈರಾಗ್ಯಕ್ಕೆ ಬೀಳುವ ಮನಸ್ಸು ಸ್ವಲ್ಪ ಕಾಲದಲ್ಲೇ ಮತ್ತೆ ಲೋಭಿಯಾಗುತ್ತದೆ !? ಏನಿದು ಇಂತಹಾ ಸೆಳೆತ !? ಈ ಬಲೆಯಿಂದ ಬಿಡಿಸಿಕೊಂಡು ಹೊರಬಂದು ಶಾಂತಿ ನೆಮ್ಮದಿಗಳಿಂದ ಸಂತೋಷವಾಗಿ ಬದುಕಿದರೆ ಅದು ಸಮೃದ್ಧವಾದ ಸುಂದರ ಬದುಕಾಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021