ಬಿಲ್ಲುಗಾರನ ಬಲ್ಮೆ ಕಂಡು ದಂಗೇರಿ ತಾ
ಪಲುಗುಣಂಗೊದಗಿ ನಿಜ ಮಾನವತೆ ಮರೆತು
ಬಲಗಯ್ಯ ಹೆಬ್ಬೆರಳ ಬಲಿಯಾಗಿ ಪಡೆದೊಡೇಂ !
ಬಲಿಯಾಯಿತೇಂ ಸತ್ಯ ಜಾಣಮೂರ್ಖ //
ದ್ರೋಣಾಚಾರ್ಯರಂತಹಾ ಗುರುಗಳು ; ಏಕಲವ್ಯನಂತಹಾ ಶಿಷ್ಯ ಈ ಸೃಷ್ಟಿಯಲ್ಲಿ ಇಂತಹಾ ಗುರುಶಿಷ್ಯರು ಬಲು ಅಪೂರ್ವ ! ಆದರೆ ಏಕಲವ್ಯನು ಗುರುದ್ರೋಣರ ಮೂರ್ತಿಯನ್ನಿಟ್ಟುಕೊಂಡೇ ಸತತಾಭ್ಯಾಸದಿಂದ ಕಲಿತ ಶಬ್ದವೇದಿಯನ್ನು ಕಂಡು ದಂಗಾದರು ! ಅರ್ಜುನನನ್ನು ಮೀರಿಸಿದ ಬಿಲ್ಲುಗಾರನಾಗಿಬಿಟ್ಟನಲ್ಲ , ಅದೂ ತನ್ನ ಮೂರ್ತಿಯನ್ನಿಟ್ಟುಕೊಂಡು ! ಗುರು ದ್ರೋಣರಿಗೆ ಏಕಲವ್ಯನ ಬಗ್ಗೆ ಅಪಾರ ಹೆಮ್ಮೆ , ಗೌರವಾದರಗಳು ಮೂಡಿದವು. ಆದರೆ ಪಕ್ಕದಲ್ಲೇ ಇದ್ದ ಅರ್ಜುನನ ಕಣ್ಣು ಕೆಂಪಾಯ್ತು ! ಕೌರವ ಪಾಂಡವರಿಗಲ್ಲದೇ ಬೇರೆಯವರಿಗೆ ಧನುರ್ವಿದ್ಯೆಯನ್ನು ಕಲಿಸುವುದಿಲ್ಲವೆಂಬ ವಚನ ನೆನಪಿಗೆ ಬಂತು ! ಗುರುದಕ್ಷಿಣೆಯಾಗಿ ಬಲಗಯ್ಯ ಹೆಬ್ಬೆರಳನ್ನೇ ಪಡೆದುಬಿಟ್ಟರು ! ಆ ಶಿಷ್ಯನೂ ಸಂತೋಷವಾಗಿ ಕೊಟ್ಟು ಕೃತಾರ್ಥನಾದ ! ಆಮೇಲೆ ಹೃದಯ ಕರಗಿತು. ಆದರೇನು !? ಹೆಬ್ಬೆರಳ ಬಲಿಯಾಗಿ ಹೋಗಿತ್ತು ! ಆದರೆ ಸತ್ಯ ಬಲಿಯಾಗಿರಲಿಲ್ಲ. ದ್ವೇಷ , ಅಸೂಯೆ , ಮಾಯೆಗಳು ಅವರನ್ನೇ ಬಿಡಲಿಲ್ಲವಲ್ಲ ! ತನ್ನ ಕ್ರೌರ್ಯದ ವಿರಾಡ್ರೂಪವನ್ನು ತೋರಿಸಿಯೇ ಬಿಟ್ಟಿತ್ತು. ಹೆಮ್ಮೆಯ ಶಿಷ್ಯ ಏಕಲವ್ಯನು ಮಾತ್ರ ವೀರ , ಶೂರ , ಸದ್ಗುಣಸಾರನಾಗಿ, ಮಹಾ ಪರಾಕ್ರಮಿಯಾಗಿ ತಾನೆಂದಿಗೂ ಚಿರ ! ಅಮರ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021