ಶಕ್ತನಾದೊಡೆ ಬಾಳ ಶಬ್ದದೊಳು ಪಿಡಿವೆಯೈ !
ಮುಕ್ತನಾಗಿಹೆಯೇನು ಬಾಳ ಬಂಧನದಿಂ !?
ಭಕ್ತನಾಗಿಹೆಯೇನು? ಕತ್ತಲೆಯ ಕಳೆವೇನು !?
ಯುಕ್ತಿಯೇಂ ಬ್ರಹ್ಮತ್ವ ಜಾಣಮೂರ್ಖ //
ಬದುಕಿನ ಅರ್ಥ , ಮಹತ್ವ , ಸಾರ ಇತ್ಯಾದಿಗಳನ್ನೆಲ್ಲಾ ನಾವು ಒಳ್ಳೇ ಮಾತುಗಾರರಾಗಿದ್ದಲ್ಲಿ , ಸ್ವಲ್ಪ ಓದಿಕೊಂಡಿದ್ದಲ್ಲಿ ಶಬ್ದದಲ್ಲಿ ಹಿಡಿದಿಡಬಹುದು. ಆದರೆ ಬಾಳ ಬಂಧನದಿಂದ ನಾವು ಮುಕ್ತರಾಗಲು ಸಾಧ್ಯವಿಲ್ಲ. ಅದೊಂದು ತರಹೆ ಅಪೀಮಿನಂತೆ ಎನ್ನಬಹುದು. ಸಿಂಬಳದ ನೊಣದ ಸ್ಥಿತಿ ಎನ್ನಲೂ ಬಹುದು ! ಆದರೆ ಬ್ರಹ್ಮಜ್ಞಾನದ ಸಾರ ಓದುವುದರಿಂದ ಬಾರದು. ಅದು ಅನುಭವದಿಂದ ಬರುವಂತಹದ್ದು. ನಮ್ಮ ಮಾತು ಬಾಳ ಕತ್ತಲೆಯನ್ನು ಕಳೆಯುವಂತಿರಬೇಕು. ಅದಕ್ಕೆ ಮೊದಲು ನಮ್ಮಲ್ಲಿ ಏಕಾಗ್ರ ಚಿತ್ತತೆ ಮತ್ತು ನಿಶ್ಚಲ ಭಕ್ತಿ ಇರಬೇಕಾಗುತ್ತದೆ. ಯುಕ್ತಿಯಿಂದ ಅಥವಾ ಶಬ್ದಾಡಂಬರದಿಂದ ಬ್ರಹ್ಮಜ್ಞಾನದ ಅಭಿವ್ಯಕ್ತಿ ಸಾಧ್ಯವಿಲ್ಲ. ಅದು ಅನುಭವ ಜನ್ಯ ! ಅಭಿವ್ಯಕ್ತಿಸಲು ಅತೀತವಾದದ್ದು ! ಅನುಭವಿಸಿದವರು ಬ್ರಹ್ಮರೇ ಆಗಿಬಿಡುತ್ತಾರೆ. ಕಣ್ಣೀರು ಧಾರಾಕಾರವಾಗಿ ಹರಿದು ಅವರ ಬದುಕೇ ಲೋಗರಿಗೆ ಒಂದು ಅದ್ಭುತ ಪಾಠವಾಗಿಬಿಡುತ್ತದೆ. ಔಪಚಾರಿಕತೆಯ ಸೋಂಕಿಲ್ಲದೇ ! ಅವರೇ ನಿಜವಾದ ಗುರುಗಳು ! ಅಂತಹವರೇ ಜಗತ್ತಿನ ಮಿಥ್ಯವನ್ನು ಸಾರಿ ಸತ್ಯದೆಡೆಗೆ ಕೊಂಡೊಯ್ವ ದಾರಿದೀಗಳು ! ಪರಿವ್ರಾಜಕರು ! ಅಂತಹಾ ಗುರುವಿನಡಿದಾವರೆಗಳಿಗೆ ಭಕ್ತಿಯಿಂದ ನಮಸ್ಕರಿಸುವ ಬನ್ನಿ ಸ್ನೇಹಿತರೇ.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021