ಖಗಮೃಗಗಳೆಲ್ಲ ತಾ ಮೌನದಿಂ ಬಾಳುತಿರೆ
ಸಿಗದುದಕೆ ಸಿಕ್ಕು ಮನ ಸಿಕ್ಕು ಸಿಕ್ಕಯ್ಯೋ !
ನಗಧರಗೆ ನಗವಿತ್ತು ನಾನಿತ್ತೆನೆಂಬಹಮ
ನಗೆಯಾಟವೆಂತ ಪರಿ ಜಾಣಮೂರ್ಖ //
ಜಗದ ಜಂಗುಳಿಯೊಳಗೆ ಡಂಗುರವ ಹೊಡೆವೇಕೆ ?
ಧಗಧಗಿಪ ಮನಕೆ ಮಿಗೆ ನಾನತ್ವ ಬೆರಸಿ !
ನಗಧರನ ನಾಮವನು ಮುದದಿ ಭಜಿಸುತ ನಮಿಸಿ
ನಗುತ ಮರೆಯಾಗೇಳೊ ಜಾಣಮೂರ್ಖ //
ಈ ಸೃಷ್ಟಿಯಲ್ಲಿ ಹಕ್ಕಿ ಪಕ್ಷಿಗಳು , ಪ್ರಾಣಿಗಳೆಲ್ಲವೂ ಮೌನವಾಗಿ ಬದುಕುತ್ತಿವೆ. ಪ್ರಚೀನ ಕಾಲದಿಂದಲೂ ಒಂದೇ ರೀತಿ ಇವೆ. ಆದರೆ ಮನುಷ್ಯ ತುಂಬಾ ಬದಲಾಗಿದ್ದಾನೆ. ಯಾವುದು ಸಿಗೋದಿಲ್ಲವೋ ಅದಕ್ಕೆ ಸಿಕ್ಕು ಮನಸ್ಸು ಕೊಟ್ಟು ತಪಿಸಿ, ಪರಿತಪಿಸಿ ಬದುಕುತ್ತಿದ್ದೇವೆ. ಭಗವಂತನಿಗೆ ಅವನ ನಗವನ್ನೇ ಕೊಟ್ಟು ನಾನು ಕೊಟ್ಟೆ ಅಂತ ಮೆರೆಯುತ್ತಾ ಇದ್ದೀವಿ ! ಇದೊಂದು ತರಹ ನಗೆಯಾಟವಲ್ಲದೇ ಮತ್ತೇನು !?
ಈ ಜಗದ ಜಂಗುಳಿಯಲ್ಲಿ ಡಂಗುರು ಸಾರುತ್ತೇವೆ ನಾನು ಕೊಟ್ಟೆ , ನಾನು ನಾನು ಎಂದು. ಮನಸ್ಸಂತೂ ಉರಿವ ಬೆಂಕಿಯಂತೆ ಧಗಧಗನೆ ಉರಿಯುತ್ತಿದೆ ! ಸುಮ್ಮನೆ ಭಗವಂತನ ನಾಮ ಭಜಿಸುತ್ತಾ , ಶಾಂತವಾಗಿ ಬದುಕಿ ಎಲ್ಲದರಂತೆ ನಾವೂ ಮರೆಯಾಗಿ ಬಿಡಬೇಕು ! ಪುರಾಣೇತಿಹಾಸಗಳಲ್ಲೂ ಬಹಳ ಮೆರೆದವರ ಪಾಡೆಲ್ಲವೂ ಹೀಗೆಯೇ ತಾನೆ !? ಅವರ ಜೀವನ ನಮಗೊಂದು ಪಾಠವಾಗಬೇಕು. ವಿಪರ್ಯಾಸವೆಂದರೆ ಅದನ್ನೆಲ್ಲಾ ಕೇಳಿ ತಲೆದೂಗುವ ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ಅಳವಟ್ಟರೆ ಬದುಕು ಧನ್ಯ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021