ಬಾಳ ಬಾವಿಯೊಳಿಳಿದು ತಿಳುವೆಂಬ ನೀರೆತ್ತ
ಲಾಳವಿಹುದಯ್ಯ ಬಲು ತಾಳಬೇಕಯ್ಯ !
ತಾಳಿಕೆಯೆ ತಪವು ಕಾಣ್ ಅರಿವ ನೀರೆತ್ತಿದರೆ
ಬಾಳೊಳಳಿಮನವೆಲ್ಲೊ ಜಾಣಮೂರ್ಖ //
ಈ ಬದುಕು ಒಂದು ದೊಡ್ಡ ಬಾವಿ. ತುಂಬ ಸಿಹಿಯಾದ ನೀರಿದೆ. ಆದರೆ ಅದು ತುಂಬಾ ಆಳದಲ್ಲಿದೆ ! ಬರೀ ನೀರಲ್ಲ ಅದು ! ತಿಳಿವೆಂಬ ನೀರು ! ತಾಳ್ಮೆ ಮತ್ತು ಎಚ್ಚರಿಕೆಯಿಂದ ಈ ಬಾಳ ಬಾವಿಯಲ್ಲಿಳಿದು ಆ ನೀರನ್ನು ತರಬೇಕು ಕಣಯ್ಯ ಗೆಳೆಯ. ತಾಳುವುದು ತಪಸ್ಸು. ತಾಳಿದವನು ಬಾಳಿಯಾನೆಂಬ ಮಾತು ಕೇಳಿಲ್ಲವೇ !? ಹಾಗೆ. ಆ ಅರಿವಿನ ಜಲ ಸಿಕ್ಕರೆ ಮುಗಿಯಿತು. ಬಾಳಿನಲ್ಲಿ ಈ ಚಂಚಲ ಮನಸ್ಸು ಸಂಸ್ಕಾರಗೊಳ್ಳುತ್ತದೆ. ಬದುಕು ಅರ್ಥಪೂರ್ಣವಾಗುತ್ತದೆ. ಅದಕ್ಕೆ ಅರಿವಿನ ಜಲ ಬೇಕು. ಕಷ್ಟವೇಕೆ !? ಗುರುವಿನ ಮೊರೆ ಹೋದರಾಯ್ತು ಮೊಗೆಮೊಗೆದು ಕೊಡುತ್ತಾರವರು. ಇದರಲ್ಲಿ ಸಂದೇಹವೇಕಯ್ಯಾ ಗೆಳೆಯಾ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021