ಜಗದ ಜಾಣರ ಜೊತೆಗೆ ಜೋಕೆ ಜಾಣನೆ ನಿನ್ನ
ನಗೆಯೊಳಾಡಿಸಿ ಹೊಗೆಗೆ ದಬ್ಬಿ ಬಿಟ್ಟಾರು
ಮೊಗವಾಡದಾ ಬಗೆಯದೇಕೊ ! ಮುಗುದತೆ ಕಳೆದು
ನಗದಾಯೊತೋ ಮೊಗವು ಜಾಣಮೂರ್ಖ //
ಈ ಜಗತ್ತಿನಲ್ಲಿ ಇತ್ತೀಚೆಗಂತೂ ಎಲ್ಲರೂ ಜಾಣರೇ ! ಬಹಳ ಎಚ್ಚರಿಕೆಯಿಂದ ಅಡಿಯಿಡಬೇಕಾಗಿದೆ. ಹಿಂದೆಲ್ಲಾ ಇಂತಹಾ ಪರಿಸ್ಥಿತಿ ಇರಲಿಲ್ಲವೇನೋ ! ಮಗುವಿನ ಮುಗ್ಧತೆ ಕ್ರಮೇಣ ಕ್ರಮೇಣ ಮಾಯವಾಗಿ ಹಾಗೇ ಮುಖವಾಡಗಳು ಪ್ರಾರಂಭವಾಗುತ್ತವೆ ಬದುಕಲ್ಲಿ ! ಒಂದು ವಯಸ್ಸಿಗೆ ಬಂದಮೇಲಂತೂ ಬರೀ ಮುಖವಾಡಗಳು ! ಮನದುಂಬಿ ನಕ್ಕ ದಿನಗಳೆಲ್ಲಿ ಹೋದವು ಗೆಳೆಯರೇ !? ಎಂದಾದರೂ ಚಿಂತಿಸಿದ್ದೀರಾ !? ನನ್ನನ್ನೂ ಸೇರಿಸಿಕೊಂಡೇ ಆತ್ಮವಿಮರ್ಶೆ ಮಾಡಿಕೊಂಡಾಗ ಕೃತಕವಾಗಿ ನಗುವುದೇ ಜಾಸ್ತಿಯಾಗಿ ಬಿಟ್ಟಿದೆ. ಆತ್ಮದಿಂದ ಬರುವ ನಗೆ ಸ್ವಲ್ಪಕಾಲವಾದರೂ ಮುಖದಮೇಲೆ ಸ್ಥಾಯಿಯಾಗಿರುತ್ತದೆ ! ಆದರೆ ಕೃತಕ ನಗು ಬೇಗ ಮಾಯವಾಗಿ ಮುಖವಾಡ ಹೊದ್ದು ನಿಂತು ಬಿಡುತ್ತದೆ. ಏಕೆ ಹೀಗಾಯಿತು !? ಸ್ವಾರ್ಥ ಯಾಕೆ ಇಷ್ಟು ಪ್ರಮಾಣದಲ್ಲಿ ಮನೆಮಾಡಿತು !? ಬದುಕಿನ ನಶ್ವರತೆಯ ಬಗ್ಗೆ ಎಲ್ಲರೂ ಮಾತನಾಡುವರಾದರೂ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ ಎನಿಸುತ್ತಿಲ್ಲವೇ ! ಯಾರನ್ನು ನಂಬಬೇಕೋ ! ಯಾರು ನಗೆಯೊಳಾಡಿಸಿ ಹೊಗೆಗೆ ದಬ್ಬಿಬಿಡುತ್ತಾರೋ ಎಂಬ ಭಯ ಎಲ್ಲರಲ್ಲೂ ! ಸ್ನೇಹಿತರೇ ಇನ್ನಾದರೂ ನಮ್ಮ ನಮ್ಮ ಮನವ ಸಂತೈಸಿಕೊಂಡು ಬದುಕೋಣ ! ಮನದಾಳದ ದೈವಾತ್ಮನನ್ನು ಜಾಗೃತಗೊಳಿಸಿ ಧರ್ಮದಿಂದ , ಪ್ರೀತಿಯಿಂದ ಬದುಕೋಣ. ಈ ನುಚ್ಚಿನ ನುಡಿಗಳಿಂದ ನಿಮಗೆ ಬೇಸರವಾಗಿದ್ದರೆ ಕ್ಷಮೆಯಿರಲಿ ಗೆಳೆಯರೇ. ವಾಸ್ತವ ಪ್ರಪಂಚದ ಅನಾವರಣ ನೈಜವಾಗಿ ಮೂಡಿಬಂದಿತಷ್ಟೆ. ಹೇಳದಿರೆ ತಾಳಲಾರದು ಈ ಮನಸ್ಸು ಅದಕ್ಕೇ ಹಂಚಿಕೊಂಡೆ. ಅನಿಸಿದ್ದನ್ನು ಹಂಚಿಕೊಂಡಾಗ ಮನಸ್ಸು ಹಗುರಾಗುತ್ತದೆ . ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021