ಮಿಥ್ಯತನು ಮಿಥ್ಯಮನ ಮಿಥ್ಯಜನ ಮಿಥ್ಯಾರ್ಥ
ಮಿಥ್ಯಾರ್ತಿಯಾಡಂಬರದ ಮಿಥ್ಯಭಾವ !
ಮಿಥ್ಯದಾಚಾರ ಮೇಣ್ ಮಂತ್ರ ತಂತ್ರಂಗಳೊಳು
ಮಿಥ್ಯಮಾಯ್ತೀ ಬದುಕು ಜಾಣಮೂರ್ಖ //
ಬೆತ್ತಲಾಯ್ತೀ ಸತ್ಯ ಮಿಥ್ಯದುಡುಗೆಯ ಬಿಟ್ಟು
ಸತ್ಯಾಂಬರವ ತೊಟ್ಟ ಮಿಥ್ಯ ಘನಮಾಯ್ತು !
ನಿತ್ಯ ನೇಪಥ್ಯದೊಳು ಸತ್ಯಮಿಣುಕುವುದಾಯ್ತು
ಸತ್ಯಾಂಧಕಾರಮಿದು ಜಾಣಮೂರ್ಖ//
ಸತ್ಯಾತ್ಮ ಮಿಥ್ಯದೊಳು ಮಿಂದರೇನಂತೆ ಮಿಗೆ
ಸತ್ಯದಾ ಹತ್ಯೆಯೆಂದುಬ್ಬಲೇಂ ಮಿಥ್ಯ !
ಸತ್ಯಮೆಂದಿಗು ಸತ್ಯ ಶಕ್ತಿಯದು ದೈವಮದು
ಸತ್ಯ ಬೆತ್ತಲೆ ಕಾಣೊ ಜಾಣಮೂರ್ಖ//
ಬ್ರಹ್ಮಸತ್ಯಾ ಜಗನ್ಮಿಥ್ಯಾ ಎಂದರು ಪೂಜ್ಯ ಶಂಕರಾಚಾರ್ಯರು. ಈ ಮಾತು ಅಕ್ಷರಶಃ ಸತ್ಯ.ಇಲ್ಲಿ ತನು , ಮನ, ಜನ , ಈ ಸಂಪತ್ತು , ಆಡಂಬರದ ಪೂಜೆ , ಮಂತ್ರ ತಂತ್ರಾದಿಗಳೆಲ್ಲವೂ ಮಿಥ್ಯವೇ ! ಮಂತ್ರ ತಂತ್ರಾದಿಗಳಿಗೆ ಅತೀತನಾದವನು ಭಗವಂತ. ಆದರೆ ಇವುಗಳೆಲ್ಲಕ್ಕೆ ಸಿಲುಕಿ ಬದುಕೇ ಮಿಥ್ಯಮಯವಾಗಿಬಿಟ್ಟಿದೆ.
ಸತ್ಯವನ್ನು ಆಶ್ರಯಿಸೋಣವೆಂದರೆ ಅದು ಮಿಥ್ಯದಿಂದ ಮೋಸಗೊಂಡು ನೇಪಥ್ಯಕ್ಕೆ ಸರಿದಂತೆ ಕಾಣುತ್ತಿದೆ. ನೇಪಥ್ಯದಲ್ಲಿ ನಿಂತು ಇಣುಕುವುದೇ ಆಯ್ತು ಅದರ ಪಾಡು. ಸುಳ್ಳು ಬಹಳ ಸುಂದರವಾಗಿರೋದರಿಂದ ಎಲ್ಲರೂ ಅದರೆಡೆಗೇ ಸಾಗುತ್ತಾರೆ. ಇದರಿಂದ ಇದನ್ನು ಸತ್ಯಕ್ಕೆ ಕವಿದಿರುವ ಅಂಧಕಾರ ಎನ್ನಬಹುದೇನು ?! ಸತ್ಯಕ್ಕೂ ಅಂಧಕಾರವೇ!!!
ಸತ್ಯಾತ್ಮರಾದ ನಾವು ಮಿಥ್ಯೆಯಲ್ಲಿ ಮಿಂದರೇನಂತೆ ! ಸತ್ಯದ ಹತ್ಯೆಯಾಯಿತು ಎಂದು ಮಿಥ್ಯವು ಉಬ್ಬಿ ಮೆರೆಯಲೇನು ? ಸತ್ಯವಂತೂ ಎಂದಿಗೂ ಸತ್ಯವೇ ! ಅದು ಶಕ್ತಿ ! ಅದೇ ದೈವ ! ಅದಕ್ಕೇ ಅದನ್ನು ಬೆತ್ತಲೆಯ ಸತ್ಯ ಎನ್ನುತ್ತಾರೆ. ಕಾರಣ ಅದು ಸತ್ಯ ! ಆಡಂಬರವಿಲ್ಲದ , ಸ್ವಾರ್ಥವಿಲ್ಲದ ದೈವವದು ! ಅದಕ್ಕೇ ಸತ್ಯವಂತರು ಯಾರಿಗೂ ಮೋಸ ಮಾಡುವುದಿಲ್ಲ ! ಬದಲಾಗಿ ಅವರೇ ಮೋಸಹೋಗುತ್ತಾರೆ. ಆದರೆ ದೈವಪರರಾದುದರಿಂದ ದೈವ ಅವರ ಕೈ ಹಿಡಿದ ಕಾಲಕ್ಕೆ ಮೋಸಗೈದವರ ಸ್ಥಿತಿ ಅಯೋಮಯ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021