ಬಿಲ್ಲಾಳು ಪಾರ್ಥಂಗೆ ಹರಿಯೊಲುಮೆಯಂತೆ ಮಿಗೆ
ಬಿಲ್ಲಾಳು ಕರ್ಣಂಗೆ ಹರಿಯ ಅವಕೃಪೆಯು
ಬಲ್ಲಿದನು ಕರ್ಣ ತಾ ಧರ್ಮಬಾಹಿರಕೊಲಿದ
ಸೊಲ್ಲೇಕೆ ವಿಧಿಯಾಟ ಜಾಣಮೂರ್ಖ //
ಕರ್ಮ ತಾ ಕರೆವಾಗ ಧರ್ಮ ನೋಡಲುಮೆಂತು !
ಧರ್ಮ ಪಕ್ಷವ ಪಿಡಿದ ಹರಿಗಂಗೆ ಹರಿಯು
ಧರ್ಮಪರನಿಗೆ ಸುಖವಧರ್ಮಪರನಿಗೆ ದುಃಖ
ಕರ್ಮಸಿದ್ಧಾಂತಮಿದು ಜಾಣಮೂರ್ಖ//
ಸ್ನೇಹಿತರೇ ಇಂದು ಎರಡು ಮುಕ್ತಕಗಳಿದ್ದು , ಎರಡೂ ಒಂದಕ್ಕೊಂದು ತುಂಬಾ ಪೂರಕ. ಈ ಎರಡು ಮುಕ್ತಕಗಳ ಉಲ್ಲೇಖವೂ ಅನಿವಾರ್ಯ ಎಂದು ತೋರಿತು. ಏಕೆಂದರೆ ಇದು ಧರ್ಮಸೂಕ್ಷ್ಮ ! ಕರ್ಮಸೂಕ್ಮವೂ ಹೌದು. ನಾವು ಕಲಿತದ್ದು ಏನೇ ವಿದ್ಯೆಯಾಗಿರಲಿ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಅನ್ನೋದು ತುಂಬಾ ಮುಖ್ಯ. ಈಗ ನೀವೇ ನೋಡಿ ಕರ್ಣ ಮತ್ತು ಅರ್ಜುನ ಇಬ್ಬರೂ ಸಹ ಅದ್ವಿತೀಯ ಬಿಲ್ಲುಗಾರರೇ ! ಆದರೂ ಧರ್ಮ ಪಕ್ಷವನ್ನು ಹಿಡಿದ ಅರ್ಜುನ ಶ್ರೀಕೃಷ್ಣನ ಕೃಪೆಗೆ , ಪ್ರೀತಿಗೆ ಪಾತ್ರನಾದ.ಆದರೆ ಕೌರವ ಪಕ್ಷದಲ್ಲಿದ್ದು ಅಧರ್ಮಪಕ್ಷದ ಪರವಾಗಿ ಇದ್ದುದರ ಫಲವಾಗಿ ಧರ್ಮನಿಷ್ಠನೇ ಆಗಿದ್ದರೂ ಸಹ ಕರ್ಣನು ಕೃಷ್ಣನ ಅವಕೃಪೆಗೆ ಪಾತ್ರನಾದ. ಸತ್ಯದ ಪರ , ಧರ್ಮದ ಪರ ಇದ್ದರೆ ಕಷ್ಟಗಳಿದ್ದರೂ ದೈವದ ಸೂಕ್ತ ಸಹಾಯ ಒದಗಿಬರುತ್ತದೆ. ಕೊನೆಯಲ್ಲಿ ಸುಖಾಂತ್ಯ ಕಟ್ಟಿಟ್ಟ ಬುತ್ತಿ. ಸತ್ಯದ ಪರವಿಲ್ಲದವರಿಗೆ ಸಧ್ಯಕ್ಕೆ ಸುಖವಿರಬಹುದಾದರೂ ಸುಖಾಂತ್ಯದ ಮಾತು ಹಾಗಿರಲಿ , ಕೊನೆಯವರೆಗೂ ನೆಮ್ಮದಿಯಿಲ್ಲದ , ಅಶಾಂತಿಯ ಬದುಕು!! ಆಯ್ಕೆ ಅವರವರಿಗೇ ಬಿಟ್ಟದ್ದು. ಧರ್ಮೋ ರಕ್ಷತಿ ರಕ್ಷಿತಃ ಯಾರು ಧರ್ಮವನ್ನು ರಕ್ಷಿಸುವನೋ ಅವನನ್ನು ಧರ್ಮವೂ ರಕ್ಷಿಸುತ್ತದೆ. ಅದೆಷ್ಟು ಸತ್ಯವೀ ಮಾತು ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021