ಸುಡದೆ ಬಿಡುವುದೆ ಹೇಳು ಮನದ ತಾಪವು ತಾನು
ಕೆಡೆಯೆ ವಿಷಯಂಗಳಿಗೆ ಬರಿದೆ ಲೋಭಕ್ಕೆ !
ಬಿಡದೆ ಮುಚ್ಚಿರೆ ಮನವು ಎದೆ ಕಣ್ಣು ಕಿವಿಯೆಲ್ಲ
ಪಡಲು ಸಂತಸಮೆಲ್ಲಿ ಜಾಣಮೂರ್ಖ//
ಇಂದು ಎಲ್ಲರ ಮನಸ್ಸುಗಳಲ್ಲೂ ಏನೋ ಒಂದು ತರಹೆಯ ಭಯ ಉದ್ವೇಗ , ಹರಿಬಿರಿ , ಸ್ಪರ್ಧಾಮನೋಭಾವ , ಆತಂಕದ ಛಾಯೆ ಎದ್ದು ಕಾಣುತ್ತಿದೆ. ಕಾರಣ ನಾವು ಲೌಕಿಕ ವಿಷಯಾಧೀನರಾಗಿ, ಅತಿಯಾದ ಲೋಭಕ್ಕೆ ಕೆಡೆದಿರುವುದೇ(ಮನಸೋತು ಬಿದ್ದಿರುವುದೇ ) ಆಗಿದೆ. ಹಾಗೆ ನಮ್ಮ ಮನಸ್ಸು , ಕಣ್ಣು , ಹೃದಯ , ಕಿವಿ ಇವುಗಳೆಲ್ಲಾ ಮುಚ್ಚಿಬಿಟ್ಟಿವೆ. ಯಾವುದಕ್ಕೆ ತೆರೆದುಕೊಳ್ಳಬೇಕೋ ಅದಕ್ಕೆ ತೆರೆದುಕೊಳ್ಳುತ್ತಿಲ್ಲ ! ಬೇರೆಲ್ಲ ಲೌಕಿಕ ಉಪಾದಿಗಳ ಭಾಗಕ್ಕೆ ಸದಾ ತೆರೆದಿರುವುದು ! ಹೀಗಿದ್ದಾಗ ಸಂತೋಷವು ಬಾ ಎಂದರೆ ಹೇಗೆ ಬರಲು ಸಾಧ್ಯ !? ಬಿತ್ತೋದೊಂದು ಬಯಸೋದಿನ್ನೊಂದು ! ಹೀಗಾಗಲು ಸಾಧ್ಯವೇನು !? ನಾವು ಏನು ಬಿತ್ತುತ್ತೇವೋ ಅದೇ ಬರೋದು ! ಈ ಸತ್ಯಗಳು ಪೊರೆಗಟ್ಟಿದ ಕಣ್ಣಿಗೆ ಹೇಗೆ ಕಾಣುತ್ತೆ !? ಪೊರೆ ಸರಿಸಿ ನೋಡಬೇಕು. ಹೃದಯ ತೆರೆದು ಭಾವಿಸಬೇಕು. ಆಗ ಮನದ ಉದ್ವೇಗ ಭಯಗಳೆಲ್ಲವೂ ಅಳಿದು ಸಂತಸದ ನೆಲೆಯಾಗುತ್ತದೆ. ಶಾಂತಿಯ ಬೀಡಾಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021