ತಪ್ಪ ತಪ್ಪೆನ್ನುತಲಿ ತಪ್ಪಗೈದವಗರುಹೆ
ಒಪ್ಪನೆಂದಿಗು ಬೆಪ್ಪ ಸಾಧಿಸುವ ತಪ್ಪ !
ತಪ್ಪುಗಳನೊಪ್ಪುತಲಿ ತಪ್ಪನೇ ಸರಿಯೆನಿಪ
ತಪ್ಪೇತಕಾಚರಿಪೆ ಜಾಣಮೂರ್ಖ //
ಈ ಪ್ರಪಂಚ ಒಂದು ವಿಚಿತ್ರ ! ಆ ವಿಚಿತ್ರಗಳ ನಡುವೆ ಅದನ್ನೆಲ್ಲಾ ಒಪ್ಪಿಕೊಂಡು ಬದುಕಲೇ ಬೇಕಾದ ಅನಿವಾರ್ಯತೆ ನಮಗೆ ! ಏನು ಮಾಡುವುದು “ಅವಶ್ಯಂ ಅನುಭೋಕ್ತವ್ಯಂ” ! ಈಗ ನೀವೇ ನೋಡಿದ್ದೀರಿ . ತಪ್ಪು ಮಾಡಿದವರಿಗೆ ನೀನು ಮಾಡ್ತಾಇರೋದು ತಪ್ಪು ಕಣಯ್ಯ ಅಂತ ಹೇಳಬಾರದು. ಅವರು ಅದನ್ನು ಸಹಿಸೋದೇ ಇಲ್ಲ. “ನಭ್ರೂಯಾತ್ ಸತ್ಯಮಪ್ರಿಯಂ” ಅಂದರೆ ಅಪ್ರಿಯವಾದ ಸತ್ಯವನ್ನು ಹೇಳಬೇಡ ಎಂದು ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ತಪ್ಪು ಗೈದವರು ವಿತಂಡವಾದ ಮಾಡಿ, ತಪ್ಪನ್ನೇ ಸರಿ ಎಂದು ಸಾಧಿಸಿಯಾದರೂ ವಿಜಯದ ನಗೆ ಬೀರುತ್ತಾರೆ. ಈ ಬದುಕಿನಲ್ಲಿ ತಪ್ಪುಗಳ ಮೇಲೆ ತಪ್ಪುಗಳನ್ನು ಆಚರಿಸುತ್ತಲೇ ಇರುತ್ತೇವೆ ! ಪಶ್ಚಾತ್ತಾಪ ಪಡುತ್ತಲೇ ಇರುತ್ತೇವೆ. ಆದರೆ ಹೊರ ಪ್ರಪಂಚದಲ್ಲಿ ತಾನು ಮಾಡುತ್ತಿರುವುದೇ ಸರಿ ಎನ್ನುವ ರೀತಿಯಲ್ಲಿ ವರ್ತಿಸುತ್ತೇವೆ. ಇದು ಕೊನೆಗೊಂಡು ಶರಣಾಗೋದು ಯಾವಾಗ !? ಶಾಶ್ವತವಾಗಿ ನಮ್ಮ ತಪ್ಪಿನ ಅರಿವಾಗಿ ನಾವು ಸರಿಯಾಗೋದು ಯಾವಾಗ !? ಸ್ವಲ್ಪ ಯೋಚಿಸಬೇಕಾದ ವಿಷಯ. ಅಲ್ಲವೇ ಗೆಳೆಯರೇ !!?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021