ನಗುವಿನಾ ಹಿಂದೇಕೆ ನೋವು ಭಯ ಬಿಗುಮಾನ
ನಗುವ ಮನದೊಳಗೆಲ್ಲ ಕೃತಕದಲೆ ಬವರ !
ನಗಕಾಗಿ ನಗುವ ನಲುಗಿಸುವೇಕೆ ಮೂಢಮತೆ
ನಗು ನಗಿಸು ನಗುತ ಬಾಳ್ ಜಾಣಮೂರ್ಖ//
ನೀವೆಂದಾದರೂ ಮನಸ್ಪೂರ್ತಿಯಾಗಿ ನಕ್ಕಿದ್ದೀರಾ !? ಹಾಗೆ ನಕ್ಕಿದ್ದರೆ ನೀವೇ ಪುಣ್ಯವಂತರು. ಇತ್ತೀಚೆಗೆ ನಗುವವರನ್ನು ಗಮನಿಸಿದರೆ ಆ ನಗು ತುಂಬಾ ನಾಗರೀಕವಾದ ನಗು! ಅದರ ಹಿಂದೆ ಏನೇನೋ ಅಡಗಿರುತ್ತದೆ. ನೋವು , ಭಯ, ಬಡಿವಾರ, ನಾಟಕ ಒಟ್ಟಿನಲ್ಲಿ ಒಳಗೆ ಒಂದು ದೊಡ್ಡ ಯುದ್ಧವೇ ನಡೀತಾ ಇರುತ್ತೆ. ಮೇಲೆ ಮಾತ್ರ ಸುಂದರ ನಗು ! ಹಣಕ್ಕಾಗಿ ಮತ್ತೆ ಸ್ವಾರ್ಥಕ್ಕಾಗಿ ನಾವೆಂತೆಂತಹಾ ನಾಟಕಗಳನ್ನು ಅಭಿನಯಿಸುತ್ತೇವೆ ! ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳೋಣ. ಬದುಕೆಲ್ಲಾ ಹೀಗೆ ಕೃತಕ ನಗುವನ್ನೇ ನಗುತ್ತಿದ್ದರೆ ನಿಜವಾಗಿ ನಾನು ನಗುವುದು ಯಾವಾಗ !? ಮನುಷ್ಯನಿಗೆ ಭಗವಂತ ನೀಡಿದ ಸುಂದರ ಉಡುಗೊರೆ ನಗು ! ಯಾಕೆ ಅದನ್ನು ಅದುಮಿಟ್ಟು ಕೃತಕ ನಗೆ ಬೀರಬೇಕು !? ಜಗದ ಚಿಂತೆಗಳು ಯಾರಿಗಿಲ್ಲ !? ಇರಲಿ ಬಿಡಿ ಅವು ಅವುಗಳ ಪಾಡಿಗೆ. ನಾವು ನಗುತ್ತಿರೋಣ. ನಕ್ಕು , ನಗಿಸಿ , ಈ ಬದುಕನ್ನು ನಗುತ್ತಲೇ ಕಳೆದು ಭಗವಂತ ಕರೆದಾಗ ಹೊರಟುಬಿಡೋಣ. ಇನ್ನು ಬೇರೆ ಹುನ್ನಾರ , ಬಡಿವಾರಗಳೆಲ್ಲಾ ಬಾಲಿಶ ! ಅಲ್ಲವೇ ಗೆಳೆಯರೇ!?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021