ದೇವನೆಲ್ಲಿಹನೆಂದು ಹುಡುಕುವೇಕೆಲ್ಲೆಲ್ಲೊ?
ಭಾವಚಕ್ಷುವ ತೆರೆಯಲಲ್ಲೆ ನಗುತಿಹನು !
ಹಾವ ಭಾವದಿ ಭಜಿಸೆ ನಲಿವ ತಾ ಚಿತ್ತದೊಳೆ
ಕಾವ ನೊಂದರ ಪೊರೆಯೆ ಜಾಣಮೂರ್ಖ//
ಎಲ್ಲಿದ್ದಾನೆ ದೇವರು !? ಇದು ಹಲವರ ಪ್ರಶ್ನೆ ! ಗುಡಿ,ಚರ್ಚು ಮಸೀದಿಗಳಲ್ಲೆ !? ದೇವಲೋಕದಲ್ಲೆ !? ಸ್ವರ್ಗದಲ್ಲೆ !? ವೈಕುಂಠದಲ್ಲೆ !? ಕೈಲಾಸದಲ್ಲೆ !? ಎಲ್ಲೂ ಹೋಗುವುದು ಬೇಡ ಕಣಯ್ಯ ಗೆಳೆಯ. ಹೃದಯದ ಕಣ್ಣು ತೆರೆದು ನೋಡಿದರೆ ಅಲ್ಲೇ ಇದ್ದಾನವನು. ಹಾವ ಭಾವಗಳಿಂದ ಭಜಿಸಿದರೆ ಅವನಿಗೆ ಎಲ್ಲಿಲ್ಲದ ಸಂತೋಷ ! ಅಲ್ಲೇ ನಲಿಯುವನವನು ! ನೊಂದವರನ್ನು ಸಂತೈಸಿದರಂತೂ ಅವನಿಗೆ ಎಲ್ಲಿಲ್ಲದ ಸಂತೋಷ. ಅದನ್ನೇ ಸ್ವಾಮಿ ವಿವೇಕಾನಂದರು ಜೀವಶಿವಸೇವೆ ಎಂದರು. ಅಂತಹವರ ಬೆಂಗಾವಲಾಗಿ ನಿಂತು ಕಾಯ್ವನವನು. ಅದಕ್ಕೇ ಭಾಗವತದಲ್ಲಿ ಭಗವಂತನು ಹೀಗೆ ಹೇಳಿದ್ದಾನೆ.
ನಾಹಂ ವಸಾಮಿ ವೈಕುಂಠೇ
ಯೋಗಿನಾಂ ಹೃದಯೇನಚ
ಮದ್ಭಕ್ತಾಂ ಯತ್ರಗಾಯಂತಿ
ತತ್ತ್ರೈವ ನಿವಸಾಮ್ಯಹಂ // ಎಂದಿದ್ದಾನೆ. ನಾನು ವೈಕುಂಠದಲ್ಲಿ ವಾಸವಾಗಿಲ್ಲ , ಯೋಗಿಗಳ ಹೃದಯದಲ್ಲೂ ವಾಸವಾಗಿಲ್ಲ ! ನನ್ನ ಭಕ್ತ ಎಲ್ಲಿ ನನ್ನನ್ನು ಭಕ್ತಿಯಿಂದ ಭಜಿಸುತ್ತಾನೋ ಅಲ್ಲಿರುತ್ತೇನೆ ಎಂದಿದ್ದಾನೆ. ಭಕ್ತಿಯಿಂದ ಭಜಿಸಬೇಕಷ್ಟೆ. ನಮ್ಮೆದೆಯ ಭಾವವೇ ದೈವ ! ಮನದ ಸಾಮ್ರಾಜ್ಯದಲ್ಲಿ ಶ್ರೀರಾಮನೂ ಇರುವನು , ರಾವಣನೂ ಇರುವನು. ಯಾರನ್ನು ಆರಾಧಿಸುವುವೆಂಬುದೇ ಮುಖ್ಯ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021